ಇಂದಿನಿಂದ 7ನೇ ಆವೃತ್ತಿಯ ಐಎಸ್‌ಎಲ್ ಫುಟ್ಬಾಲ್ ಟೂರ್ನಿ

Update: 2020-11-20 04:59 GMT

ಬಾಂಬೋಲಿಮ್ (ಗೋವಾ): ಮುಚ್ಚಿದ ಬಾಗಿಲುಗಳ ಹಿಂದೆ ಮತ್ತು ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಮೆಂಟ್ ಶುಕ್ರವಾರ ಪ್ರಾರಂಭವಾಗಲಿದೆ.

ಐಎಸ್‌ಎಲ್ ಎಂಟು ತಿಂಗಳ ಹಿಂದೆ ಭಾರತದಲ್ಲಿ ಕೋವಿಡ್-19 ಕಾರಣದಿಂದಾಗಿ ಲಾಕ್‌ಡೌನ್ ಜಾರಿಯಾದ ಬಳಿಕ ಆಯೋಜಿಸಲಾಗುವ ದೇಶದ ಮೊದಲ ಪ್ರಮುಖ ಪಂದ್ಯಾವಳಿಯಾಗಿದೆ. ಮೋಹನ್ ಬಗಾನ್ ಮತ್ತು ಕೇರಳ ಬ್ಲಾಸ್ಟರ್ಸ್ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುವುದರೊಂದಿಗೆ ಏಳನೇ ಆವೃತ್ತಿಯ ಐಎಸ್‌ಎಲ್‌ಗೆ ಚಾಲನೆ ದೊರೆಯಲಿದೆ.

ನವೆಂಬರ್ 27ರಂದು ಫತೋರ್ಡಾದಲ್ಲಿ ಎಟಿಕೆ ಮೋಹನ್ ಬಗಾನ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳ ನಡುವೆ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ಕಳೆದ ಋತುವಿನ ಐಎಸ್‌ಎಲ್ ಚಾಂಪಿಯನ್ ಎಟಿಕೆ ಮತ್ತು ಐ-ಲೀಗ್ ಚಾಂಪಿಯನ್ ಮೋಹನ್ ಬಗಾನ್ ತಂಡಗಳು ಒಂದು ಕ್ಲಬ್‌ನಲ್ಲಿ ವಿಲೀನಗೊಂಡು, ಎಟಿಕೆ ಮೋಹನ್ ಬಗಾನ್ ಎನಿಸಿಕೊಂಡ ಬಳಿಕ ತನ್ನ ಮೊದಲ ಪಂದ್ಯಾವಳಿಯಲ್ಲಿ ಆಡುತ್ತಿದೆ. ಏಳನೇ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಮುಂಚೂಣಿಯಲ್ಲಿದೆ.

ಸ್ಟಾರ್ ಇಂಡಿಯಾ ಡಿಫೆಂಡರ್ ಸಂದೇಶ್ ಜಿಂಗನ್,ಕಳೆದ ಋತುವಿನ ಚಾಂಪಿಯನ್ ಎಟಿಕೆ ತಂಡದ ಪ್ರಮುಖ ಆಟಗಾರ ಮತ್ತು ಫಿಜಿ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ರಾಯ್ ಕೃಷ್ಣ ಎದುರಾಳಿ ತಂಡದ ನಿದ್ದೆಗೆಡಿಸಿದ್ದಾರೆ. ರಾಯ್ ಕಳೆದ ಋತುವಿನ ಜಂಟಿ-ಟಾಪ್ ಸ್ಕೋರರ್ ಆಗಿದ್ದಾರೆ. 21 ಪಂದ್ಯಗಳಿಂದ 15 ಗೋಲುಗಳನ್ನು ಗಳಿಸಿದ್ದಾರೆ. ಎಟಿಕೆ ಕಳೆದ ವರ್ಷ ಮೂರನೇ ಬಾರಿ ಐಎಸ್‌ಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ರಾಯ್ ಕೃಷ್ಣ ಫೈನಲ್‌ನಲ್ಲಿ ಎಟಿಕೆ ತಂಡದ ನಾಯಕರಾಗಿದ್ದರು. ಹೊಸದಾಗಿ ರೂಪುಗೊಂಡ ಎಟಿಕೆ ಮೋಹನ್ ಬಗಾನ್ ತಂಡವನ್ನು ರಾಯ್ ಕೃಷ್ಣ ನಾಯಕರಾಗಿ ಮುನ್ನಡೆಸಲಿದ್ದಾರೆ.

ಕಳೆದ ಋತುವಿನಲ್ಲಿ ಲೀಗ್ ವಿನ್ನರ್ಸ್ ಶೀಲ್ಡ್ ಜಯಿಸಿದ್ದ ಎಫ್‌ಸಿ ಗೋವಾ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಗುಂಪು ಹಂತಕ್ಕೆ ಅರ್ಹತೆ ಪಡೆದ ಭಾರತದ ಮೊದಲ ತಂಡವಾಗಿತ್ತು. ಸ್ಟಾರ್ ಫಾರ್ವರ್ಡ್‌ಗಳಾದ ಫೆರಾನ್ ಕೊರೊಮಿನಾಸ್ ಮತ್ತು ಹ್ಯೂಗೋ ಬೌಮಸ್‌ರ ನಿರ್ಗಮನದಿಂದ ಗೋವಾ ಎಫ್‌ಸಿ ದುರ್ಬಲಗೊಂಡಿರುವಂತೆ ಕಾಣಿಸುತ್ತಿದೆ. ಈ ಇಬ್ಬರೂ ಆಟಗಾರರು ಐಎಸ್‌ಎಲ್‌ನಲ್ಲಿ ತಂಡದ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಹೀಗಿದ್ದರೂ ತಂಡಕ್ಕೆ ಕೆಲವು ಒಳ್ಳೆಯ ಆಟಗಾರರ ಸೇರ್ಪಡೆಯಾಗಿದೆ. ಈ ತಂಡ ಪ್ಲೇ-ಆಫ್ ಹಂತಕ್ಕೇರುವ ವಿಶ್ವಾಸದಲ್ಲಿದೆ. 2015 ಮತ್ತು 2018-19ರಲ್ಲಿ ಗೋವಾ ಎಫ್‌ಸಿ ಫೈನಲ್‌ನಲ್ಲಿ ನಿರ್ಗಮಿಸಿತ್ತು. ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡವು ಕೋಚ್ ಸ್ಪೇನ್‌ನ ಕಾರ್ಲೆಸ್ ಕ್ಯುಡ್ರಾಟ್ ಮಾರ್ಗದರ್ಶನದಲ್ಲಿ ಸಜ್ಜಾಗಿದೆ. ಎರಡು ಬಾರಿ ಗೋಲ್ಡನ್ ಗ್ಲೋವ್ ವಿಜೇತ ಗುರ್‌ಪ್ರೀತ್ ಸಿಂಗ್ ಸಂಧು ಮತ್ತು ಐಎಸ್‌ಎಲ್‌ನ ಅತ್ಯಧಿಕ ಗೋಲ್ ಸ್ಕೋರರ್ ಸುನೀಲ್ ಛೆಟ್ರಿ, ಡಿಫೆಂಡರ್ ಜುವಾನಾನ್ ಮತ್ತು ಮಿಡ್‌ಫೀಲ್ಡರ್‌ಗಳಾದ ಎರಿಕ್ ಪಾರ್ಟಾಲು ಮತ್ತು ಡಿಮಾಸ್ ಡೆಲ್ಗಾಡ್ ಅವರನ್ನು ಕಟ್ಟಿಹಾಕುವಲ್ಲಿ ಕಾರ್ಲೆಸ್ ಕ್ಯುಡ್ರಾಟ್ ಯಶಸ್ವಿಯಾಗಿದ್ದಾರೆ.

 ಆಶಿಕ್ ಕುರುನಿಯನ್ ಮತ್ತು ಉದಂತ ಸಿಂಗ್ ಸೇರಿದಂತೆ ಯುವ ಮತ್ತು ಪ್ರತಿಭಾವಂತ ಆಟಗಾರರನ್ನು ಸಹ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಮುಂಬೈ ಸಿಟಿ ಎಫ್‌ಸಿ ಮತ್ತೊಂದು ತಂಡವಾಗಿದ್ದು, ಭಾರೀ ಬದಲಾವಣೆಯೊಂದಿಗೆ ಕಾಣಿಸಿಕೊಂಡಿದೆ. , ಕನಿಷ್ಠ ಪ್ಲೇ-ಆಫ್‌ಗೇರುವ ಗುರಿ ಹೊಂದಿದೆ. ಅಬುಧಾಬಿ ಮೂಲದ ಸಿಟಿ ಫುಟ್ಬಾಲ್ ಗ್ರೂಪ್ ಮುಂಬೈ ಸಿಟಿ ಎಫ್‌ಸಿಯಲ್ಲಿ ಬಹುಪಾಲು ಪಾಲನ್ನು ಖರೀದಿಸುವುದರೊಂದಿಗೆ ಕ್ಲಬ್ ತಂಡವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಈ ತಂಡ ಸೇರ್ಪಡೆಯಾದ ದೊಡ್ಡ ಹೆಸರು ಲೋಬೆರಾ ಎಫ್‌ಸಿ ಗೋವಾವನ್ನು 2018-19ರ ಫೈನಲ್‌ಗೆ ಮುನ್ನಡೆಸಿದ್ದ ಎಫ್‌ಸಿ ಗೋವಾದ ಮುಖ್ಯ ಕೋಚ್ ಸೆರ್ಗಿಯೋ ಲೋಬೆರಾ ಮುಂಬೈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಎಫ್‌ಸಿ ಗೋವಾದ ಕೆಲವು ಉತ್ತಮ ಆಟಗಾರರಾದ ಮೌರ್ಟಾಡಾ ಫಾಲ್, ಮಂದಾರ್ ರಾವ್ ದೇಸಾಯಿ ಮತ್ತು ಹ್ಯೂಗೋ ಬೌಮಸ್‌ರನ್ನು ತಮ್ಮಾಂದಿಗೆ ಕರೆತಂದಿದ್ದಾರೆ. ಲಿವರ್‌ಪೂಲ್ ದಂತಕಥೆ ರಾಬಿ ಫೌಲರ್ ನೇತೃತ್ವದ ಈಸ್ಟ್ ಬೆಂಗಾಲ್ ಮತ್ತು ಎರಡು ಬಾರಿ ಐಎಸ್‌ಎಲ್ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ಕಪ್ಪು ಕುದುರೆಗಳಾಗಿ ಗುರುತಿಸಿಕೊಂಡಿದೆ. ಈ ಬಾರಿ ಟೂರ್ನಿಯಲ್ಲಿ ಸ್ಪರ್ಧಾತ್ಮಕ 10 ತಂಡಗಳನ್ನು 3ಗುಂಪುಗಳಾಗಿ ವಿಂಗಡಿಸಲಾಗಿದೆ. ಎ’ಗ್ರೂಪ್ 4 ತಂಡಗಳನ್ನು ಮತ್ತು ಗ್ರೂಪ್ ಬಿ ಮತ್ತು ಸಿ ತಲಾ 3 ತಂಡಗಳನ್ನು ಒಳಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News