×
Ad

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ 'ಸ್ಕಾಲರ್ ಶಿಪ್ ಕೊಡಿ' ಆಂದೋಲನ

Update: 2020-11-20 15:10 IST

ಮಂಗಳೂರು, ನ.20: ಸ್ಕಾಲರ್‌ಶಿಪ್ ಮಂಜೂರಾತಿಯಲ್ಲಿ ವಿಳಂಬ ಹಾಗೂ ಅವ್ಯವಸ್ಥೆ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪಿಎಚ್‌ಡಿ, ಎಂಫಿಲ್ ಫೆಲೋಶಿಪ್ ಕಡಿತಗೊಳಿಸಿರುವ ವಿರುದ್ಧ ಸ್ಕಾಲರ್‌ಶಿಪ್ ಕೊಡಿ ವಿದ್ಯಾರ್ಥಿ ಆಂದೋಲನ ನಡೆಸಲು ನಿರ್ಧರಿಸಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಇನ್ನೇನು ಆರಂಭಗೊಳ್ಳಲಿದೆ. ಕೊರೊನಾದ ಪರಿಣಾಮದಿಂದ ಜನರ ಆರ್ಥಿಕ ಸ್ಥಿತಿಗತಿ ತೀರಾ ಹದಗೆಟ್ಟಿರುವುದರಿಂದ ಪೋಷಕರು ತಮ್ಮ ಮಕ್ಕಳ ಫೀಸ್ ಕಟ್ಟಲು ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ಶಿಕ್ಷಣ ಸಂಸ್ಥೆಗಳು ಕೂಡಾ ಆಡ್ಮಿಶನ್ ಫೀಸ್ ಹೆಚ್ಚಿಸಿರುವುದಲ್ಲದೇ ಒಂದೇ ಕಂತಿನಲ್ಲಿ ಶುಲ್ಕವನ್ನು ಕಟ್ಟಲು ಒತ್ತಾಯಿಸುತ್ತಿದ್ದಾರೆ. ಸರಕಾರ ಕೂಡ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ತರಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುವಂತೆ ಆಗ್ರಹಿಸಿ ಈ ಆಂದೋಲನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಲು ಸ್ಕಾಲರ್ ಶಿಪ್‌ನ್ನೇ ಅವಲಂಬಿಸಿದ್ದಾರೆ. ಆದರೆ ಸಾಲರ್‌ಶಿಪ್‌ನಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ರಾಜ್ಯದ ಹಲವು ವಿಧ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಪ್ರತಿ ಬಾರಿ ಸರಕಾರ ಮತ್ತು ಅಲ್ಪಸಂಖ್ಯಾತ ಇಲಾಖೆಯು ಸ್ಕಾಲರ್ ಶಿಪ್ ವಿಚಾರದಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರುವುದರಲ್ಲಿ ವಿಫಲವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದಕ್ಕೆ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಸ್ಕಾಲರ್ ಶಿಪ್ ಕೊಡಿ ರಾಜ್ಯ ವ್ಯಾಪಿ ವಿದ್ಯಾರ್ಥಿ ಆಂದೋಲನವನ್ನು ನಡೆಸಲು ನಿರ್ಧರಿಸಿದೆ. ಈ ಆಂದೋಲನದಲ್ಲಿ ವಿವಿಧ ರೀತಿಯ ಹೋರಾಟ ರೂಪುಗೊಳ್ಳಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಪೋಷಕರು ಆಂದೋಲನಕ್ಕೆ ಕೈ ಜೋಡಿಸಬೇಕೆಂದು ಎಂದು ಅವರು ವಿನಂತಿಸಿದರು.

ಕ್ಯಾಂಪಸ್ ಫ್ರಂಟ್ ಆಫ್  ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸಮೀರುದ್ದೀನ್, ಮುಶೀದಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News