'ಲವ್ ಜಿಹಾದ್' ದೇಶ ವಿಭಜಿಸಲು ಬಿಜೆಪಿ ಸೃಷ್ಟಿಸಿರುವ ಪದ: ಅಶೋಕ್ ಗೆಹ್ಲೋಟ್

Update: 2020-11-20 14:57 GMT

ಜೈಪುರ, ನ.20: ದೇಶವನ್ನು ವಿಭಜಿಸಲು ಮತ್ತು ದೇಶದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಉದ್ದೇಶದಿಂದ ಬಿಜೆಪಿಯು ಲವ್‌ ಜಿಹಾದ್ ಎಂಬ ಪದವನ್ನು ಸೃಷ್ಟಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಬಿಜೆಪಿ ಪಕ್ಷವು ವೈವಾಹಿಕ ಜತೆಗಾರರ ಆಯ್ಕೆಯಲ್ಲಿ ಸಂವಿಧಾನ ಮತ್ತು ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ . ವಯಸ್ಕರ ನಡುವಿನ ಸಮ್ಮತಿಗೆ ಸರಕಾರದ ಒಪ್ಪಿಗೆ ಅಗತ್ಯ ಎಂಬ ಸನ್ನಿವೇಶವನ್ನು ಸೃಷ್ಟಿಸಲು ಅವರು (ಬಿಜೆಪಿ) ಬಯಸುತ್ತಿದ್ದಾರೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ಮದುವೆ ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದೆ. ಈ ಸ್ವಾತಂತ್ರ್ಯವನ್ನು ನಿಗ್ರಹಿಸಲು ಕಾನೂನು ಜಾರಿಗೊಳಿಸುವುದು ಸಂಪೂರ್ಣ ಅಸಾಂವಿಧಾನಿಕ ಕ್ರಮವಾಗಿದ್ದು ಇದನ್ನು ಯಾವುದೇ ನ್ಯಾಯಾಲಯ ಮಾನ್ಯ ಮಾಡುವುದಿಲ್ಲ. ಪ್ರೀತಿಯಲ್ಲಿ ಜಿಹಾದ್‌ಗೆ ಜಾಗವಿಲ್ಲ . ಕೋಮು ಸೌಹಾರ್ದತೆ ಕೆಡಿಸಲು ಬಿಜೆಪಿ ಹೂಡಿರುವ ಷಡ್ಯಂತ್ರ ಇದಾಗಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಗೆಹ್ಲೋಟ್ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಜೇಂದ್ರಸಿಂಗ್ ಶೆಖಾವತ್ ‘ ಡಿಯರ್ ಅಶೋಕ್‌ಜಿ, ಲವ್‌ ಜಿಹಾದ್ ಎಂಬುದು ಮದುವೆಯನ್ನು ವೈಯಕ್ತಿಕ ವ್ಯವಹಾರವೆಂದು ನಂಬಿರುವ(ಅಲ್ಲ ಎಂದು ನಂತರ ತಿಳಿಯುವ) ಸಾವಿರಾರು ಯುವತಿಯರನ್ನು ವಂಚಿಸುವ ಬಲೆಯಾಗಿದೆ. ಜೊತೆಗೆ, ಇದು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದರೆ ಮಹಿಳೆಯರು ತಮ್ಮ ಮೊದಲಿನ ಹೆಸರು ಮತ್ತು ಧರ್ಮವನ್ನು ಉಳಿಸಿಕೊಳ್ಳಲು ಯಾಕೆ ಸ್ವತಂತ್ರರಾಗಿಲ್ಲ ? ಎಂದು ಪ್ರಶ್ನಿಸಿದ್ದಾರೆ. ವೈಯಕ್ತಿಕ ಸ್ವಾತಂತ್ರ್ಯದ ಸೋಗಿನಲ್ಲಿ ನಡೆಯುತ್ತಿರುವ ಈ ಕಪಟ ನಾಟಕವನ್ನು ಬೆಂಬಲಿಸುತ್ತಿರುವುದು ಕಾಂಗ್ರೆಸ್‌ನ ಕೋಮು ಅಜೆಂಡಾದ ಪ್ರದರ್ಶನವಾಗಿದೆ. ಪದ, ಗಲಭೆ ಮತ್ತು ದ್ವೇಷವನ್ನು ಉತ್ಪಾದಿಸುವುದು ಕಾಂಗ್ರೆಸ್‌ನ ವಿಶೇಷ ಗುಣವಾಗಿದೆ ಎಂದು ಶೆಖಾವತ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News