ಜಾನುವಾರು ಸಾಕಾಣಿಕೆಗೆ ಪೂರ್ವಾನುಮತಿ; ಸಹಕಾರಿಗಳೆಲ್ಲರ ವಿರೋಧ: ಡಾ.ಎಂ.ಎನ್.ರಾಜೇಂದ್ರಕುಮಾರ್

Update: 2020-11-20 13:05 GMT

ಉಡುಪಿ, ನ.20:ಜಾನುವಾರಗಳ ಸಾಕಾಣಿಕೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಪೂರ್ವಾನುಮತಿ ಪಡೆಯಬೇಕೆನ್ನುವ ಹಸಿರು ಪೀಠದ ನಿರ್ದೇಶನವನ್ನು ಕೆಎಂಎಫ್ ಹಾಗೂ ಸಹಕಾರಿಗಳೆಲ್ಲರೂ ವಿರೋಧಿಸುತ್ತಾರೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಇವುಗಳ ಜಂಟಿ ಆಶ್ರಯದಲ್ಲಿ 67ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ನಡೆದ ಉಡುಪಿ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ‘ನಂದಿನಿ ಆನ್ ವೀಲ್ಸ್’ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಬ್ರಹ್ಮಗಿರಿಯಲ್ಲಿರುವ ಲಯನ್ಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಹಸಿರುಪೀಠದ ಮೂಲ ಉದ್ದೇಶವೇ ತಪ್ಪು. ಇದರಿಂದ ಹೈನುಗಾರಿಕೆ ಹಾಗೂ ಹೈನುಗಾರರಿಗೆ ಸಮಸ್ಯೆಯುಂಟಾಗಲಿದೆ ಎಂದರು.

ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಮೂರು ಸಹಕಾರಿ ಸಂಘಟನೆಗಳೆಂದರೆ ಡಿಸಿಸಿ ಬ್ಯಾಂಕ್, ಕೆಎಂಎಪ್ ಹಾಗೂ ಕ್ಯಾಂಪ್ಕೋ. ಒಕ್ಕೂಟವಂತೂ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ. ಜಿಲ್ಲೆಯ ರೈತರು ಕೇವಲ ಕೃಷಿಯೊಂದರ ಮೇಲೆ ಮಾತ್ರ ಅವಲಂಬಿತರಾಗದೇ ಹೈನುಗಾರಿಕೆ ಹಾಗೂ ತೋಟಗಾರಿಕಾ ಬೆಳೆಗಳನ್ನೂ ಬೆಳೆದು ಆರ್ಥಿಕವಾಗಿ ಸದೃಢರಾಗಿದ್ದಾರೆ. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ಕೃಷಿಕರ್ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದರು.

ಕೊರೋನದ ಅವಧಿಯಲ್ಲೂ ಸಹಕಾರಿ ಸಂಘಗಳ ಠೇವಣಿ ಕಡಿಮೆಯಾಗಿಲ್ಲ. ಅವುಗಳು ಆರ್ಥಿಕವಾಗಿ ಸದೃಢವಾಗಿವೆ. ರೈತರೂ ಸದೃಢರಾಗಿದ್ದಾರೆ. ಅಡಿಕೆ ಬೆಳೆಗಾರರಂತೂ ಈಗ ಖುಷಿಯಾಗಿದ್ದಾರೆ. ಅಡಿಕೆ ಬೆಲೆ ಈಗ 300ರೂ.ನಿಂದ 400ಕ್ಕೇರಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.

ಮಹಾಮಂಡಳಕ್ಕೆ ಜನೌಷಧಿ ಏಜೆನ್ಸಿ:  ಕೇಂದ್ರ ಸರಕಾರದ ಜನೌಷಧಿಯ ಏಜೆನ್ಸಿ ಈಗ ಸಹಕಾರ ಮಾರಾಟ ಮಹಾಮಂಡಳಿಗೆ ದೊರಕಿದ್ದು, ಅದನ್ನು ನಾವು ಖಾಸಗಿಯವರಿಗೆ ನೀಡದೇ ಸಹಕಾರಿಗಳಿಗೆ ಜನೌಷಧಿ ಕೇಂದ್ರ ತೆರೆಯಲು ಅವಕಾಶ ನೀಡಲಿದೆ. ಈಗಾಗಲೇ 500 ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದರು.

ಜನೌಷಧಿ ಕುರಿತಂತೆ ಜನಸಾಮಾನ್ಯರಿಗೆ ಹೆಚ್ಚಿನ ಅರಿವಿಲ್ಲ. ಇದಕ್ಕಾಗಿ ನಾವೊಂದು ಆ್ಯಪ್‌ನ್ನು ಸಿದ್ಧಪಡಿಸಲಿದ್ದೇವೆ. ಅದರ ಮೂಲಕ ಶ್ರೀಸಾಮಾನ್ಯನೂ ತೀರಾ ಅಗ್ಗದ ಬೆಲೆಗೆ ಔಷಧಿಯನ್ನು ಖರೀದಸಲು ಸಾಧ್ಯವಾಗಲಿದೆ ಎಂದವರು ವಿವರಿಸಿದರು.

ಅಲ್ಲದೇ ಮಾರಾಟ ಮಹಾಮಂಡಳ, ಸಹಕಾರಿ ಕ್ಷೇತ್ರದ ಮೂಲಕ ರಾಜ್ಯದ ಹರಿಹರದಲ್ಲಿ 12.5 ಲಕ್ಷ ಟನ್ ಸಾಮರ್ಥ್ಯದ ಯೂರಿಯಾ ರಾಸಾಯನಿಕ ಗೊಬ್ಬರ ತಯಾರಿಕಾ ಘಟಕವೊಂದನ್ನು ಜಪಾನಿ ತಂತ್ರಜ್ಞಾನವನ್ನು ಬಳಸಿ ಆರಂಭಿಸಲಿದೆ ಎಂದೂ ರಾಜೇಂದ್ರಕುಮಾರ್ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಪ್ರಸ್ತುತ ದಿನಗಳಲ್ಲಿ ಡಿಜಿಟಲೈಜೇಷನ್ ಅತ್ಯಂತ ಅಗತ್ಯವಿದ್ದು, ಈಗಾಗಲೇ ಡೀಲರ್ ಗಳಿಂದ ಮೊಬೈಲ್ ಆ್ಯಪ್ ಮೂಲಕ ಇಂಡೆಂಟ್ ಪಡೆಯಲಾಗುತ್ತಿದೆ. ಸಹಕಾರಿ ಹಾಲು ಉತ್ಪಾದಕರ ಸಂಘದ ಮೂಲಕ ಸಾಫ್ಟ್‌ವೇರ್ ಅಳವಡಿಸಲಾಗುತಿದ್ದು, ಮುಂದೆ ಇದನ್ನು ಎಲ್ಲಾ ಸಹಕಾರಿ ಸಂಘಗಳಿಗೂ ಅಳವಡಿಸಲು ಕ್ರಮ ತೆಗೆದು ಕೊಳ್ಳಲಾಗುತ್ತಿದೆ ಎಂದರು.

ಅಲ್ಲದೇ ಹಾಲಿನ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ ‘ನಂದಿನಿ ಆನ್ ವೀಲ್ಸ್’ ಮೂಲಕ ಉಭಯ ಜಿಲ್ಲೆಗಳ ಮನೆಮನೆಗೂ ತಲುಪಿಸಲಾಗುತ್ತಿದೆ ಎಂದು ರವಿರಾಜ್ ಹೆಗ್ಡೆ ನುಡಿದರು.

ಸಮಾರಂಭದಲ್ಲಿ ಒಕ್ಕೂಟದ ಜಿಲ್ಲಾ ಮಟ್ಟದ ಅತ್ಯುತ್ತಮ ಡೀಲರ್‌ಗಳನ್ನು ಗುರುತಿಸಿ ಗೌರವಿಸಲಾಯಿತು. ಅಲ್ಲದೇ ಎಸೆಸೆಲ್ಸಿ ಮತ್ತು ಪಿಯುಸಿಗಳಲ್ಲಿ ಅತ್ಯುತ್ತಮ ಸಾದನೆ ತೋರಿದ ಹಾಲು ಉತ್ಪಾದಕರ ಮತ್ತು ಡೀಲರ್‌ಗಳ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ.ಸುರೇಶ್, ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಹಾಗೂ ಒಕ್ಕೂಟದ ವಿವಿಧ ನಿರ್ದೇಶಕರು ಉಪಸ್ಥಿತರಿದ್ದರು.

ಒಕ್ಕೂಟದ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಸ್ವಾಗತಿಸಿದರೆ, ಸಹಾಯಕ ವ್ಯವಸ್ಥಾಪಕ ಸುಧಾಕರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News