​ಯಕ್ಷಗಾನದ ಬಗ್ಗೆ ಮಡಿವಂತಿಕೆ ಬೇಡ: ಜಬ್ಬಾರ್ ಸಮೋ

Update: 2020-11-20 13:58 GMT

ಮಂಗಳೂರು, ನ.20: ತುಳುನಾಡಿನ ಗಂಡುಕಲೆಯಾದ ಯಕ್ಷಗಾನದ ಬಗ್ಗೆ ಮಡಿವಂತಿಕೆ ಮಾಡುವ ಅಗತ್ಯವಿಲ್ಲ. ಅದು ಈ ನೆಲದ ಸತ್ವವುಳ್ಳದ್ದು ಮತ್ತು ಸಾಮರಸ್ಯದ ಗುಣವಿರುವಂತದ್ದಾಗಿದೆ ಎಂದು ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಅಭಿಪ್ರಾಯಪಟ್ಟರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ತುಳು ಭವನದಲ್ಲಿ ಶುಕ್ರವಾರ ನಡೆದ ‘ಯಕ್ಷಗಾನ ಮತ್ತು ಬ್ಯಾರಿ ಸಂಬಂಧ’ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯಕ್ಷಗಾನದಲ್ಲಿ ಬಪ್ಪಬ್ಯಾರಿಯ ಪಾತ್ರ ಮೂಡಿಬರುತ್ತಿರುವುದು ಬ್ಯಾರಿ ಸಂಸ್ಕೃತಿ ಮತ್ತು ಪರಂಪರೆಯ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಯಕ್ಷಗಾನವು ಎಲ್ಲರಿಗೂ ದಕ್ಕುವ ಒಂದು ನೋಟವಾಗಿದೆ. ಹಾಗಾಗಿ ಅದರಲ್ಲಿ ಪ್ರತ್ಯೇಕತೆಯನ್ನು ಕಾಣಲು ಸಾಧ್ಯವೇ ಇಲ್ಲ ಎಂದ ಜಬ್ಬಾರ್ ಸಮೋ ತುಳು, ಕನ್ನಡ, ಮಲಯಾಳಂ, ಹಿಂದಿ, ಇಂಗ್ಲಿಷ್‌ನಲ್ಲಿ ಯಕ್ಷಗಾನದಲ್ಲಿ ಮಾಡಬಹುದಾದರೆ ಬ್ಯಾರಿ ಭಾಷೆಯಲ್ಲಿ ಯಕ್ಷಗಾನ ಮಾಡಲು ಕಷ್ಟವಾಗದು. ಆದರೆ ಯಕ್ಷಗಾನದಲ್ಲಿ ಬಳಕೆ ಮಾಡಬಹುದಾದ ಬ್ಯಾರಿ ಭಾಷೆಯ ಸೊಗಡಿನ ಪರಿಕಲ್ಪನೆಯು ಮುಖ್ಯವಾಗಿದೆ. ಯಕ್ಷಗಾನಕ್ಕೆ ಪೌರಾಣಿಕ ಕತೆಯೇ ಆಗಬೇಕೆಂದಿಲ್ಲ. ಬ್ಯಾರಿ ಭಾಷೆಯಲ್ಲೂ ಅನೇಕ ಕಥಾ ವಸ್ತುವನ್ನಿಟ್ಟು ಯಕ್ಷಗಾನ ಮಾಡಬಹುದಾಗಿದೆ. ಅದರೆ ಅದಕ್ಕೆ ಬ್ಯಾರಿ ಶಬ್ಧಗಳ ಕ್ರೋಢೀಕರಣವೇ ಬಹುದೊಡ್ಡ ಸವಾಲು ಆಗಿದೆ ಎಂದು ಜಬ್ಬಾರ್ ಸಮೋ ಅಭಿಪ್ರಾಯಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾರಿ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ‘ಬೆಲ್ಕಿರಿ’ ದ್ವೈಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗಿರೀಶ್ ರೈ ಕಕ್ಕೆಪದವು ಮತ್ತು ಬಳಗದಿಂದ ಬಪ್ಪಬ್ಯಾರಿ ಯಕ್ಷಗಾನ ನಡೆಯಿತು.

ಅಕಾಡಮಿಯ ಸದಸ್ಯರಾದ ಚಂಚಲಾಕ್ಷಿ, ಸುರೇಖಾ, ರಾಧಾಕೃಷ್ಣ ನಾವಡ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಸಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News