×
Ad

​ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಪ್ರಸ್ತಾಪ ಏಕಾಏಕಿ ರದ್ದು: ಉಡುಪಿ ಜಿಲ್ಲೆಯ ಕ್ರೈಸ್ತ ಮುಖಂಡರ ಅಸಮಾಧಾನ

Update: 2020-11-20 20:24 IST

ಉಡುಪಿ, ನ.20: ರಾಜ್ಯ ಸರಕಾರ 2019-2020ನೆ ಸಾಲಿನ ಬಜೆಟ್‌ನಲ್ಲಿ 200ಕೋಟಿ ರೂ. ಅನುದಾನ ಮೀಸಲಿರಿಸಿ ಘೋಷಿಸಿರುವ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಯ ಪ್ರಸ್ತಾಪವನ್ನು ಉದ್ಘಾಟನೆಗೆ ಕೆಲವೇ ದಿನಗಳು ಇರುವಾಗ ಏಕಾಏಕಿ ರದ್ದು ಮಾಡಿದೆ ಎಂದು ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ರಾಜ್ಯದಲ್ಲಿನ ಸಣ್ಣ ಪುಟ್ಟ ಸಮುದಾಯಗಳಿಗೂ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಿರುವ ಸರಕಾರ, ಕ್ರೈಸ್ತರ ನಿಗಮವನ್ನು ರದ್ದುಗೊಳಿಸುವ ಮೂಲಕ ರಾಜ್ಯದಲ್ಲಿರುವ 35ಲಕ್ಷಕ್ಕೂ ಅಧಿಕ ಕ್ರೈಸ್ತ ಸಮುದಾಯದ ಕನಸುಗಳನ್ನು ನುಚ್ಚುನೂರು ಮಾಡಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಯಾವ ಕಾರಣಕ್ಕೆ ಮತ್ತು ಯಾರ ಒತ್ತಡಕ್ಕೆ ಮಣಿದು ಈ ಪ್ರಸ್ತಾಪವನ್ನು ಕೈಬಿಟ್ಟಿದ್ದಾರೆ ಎಂಬುದಾಗಿ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಕ್ರೈಸ್ತ ಸಮುದಾಯವು ರಾಜ್ಯದಲ್ಲಿ ಶಿಕ್ಷಣ, ಸಮಾಜ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ಸೇವೆ ಹಾಗೂ ಕೊಡುಗೆಗಳನ್ನು ನೀಡಿದೆ. ಕ್ರೈಸ್ತರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರಕಾರದ ಜೊತೆಗೂಡಿ, ಶಾಂತಿ ಹಾಗೂ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿದ್ದಾರೆ. ಬಹಳಷ್ಟು ಬಡ ಕ್ರೈಸ್ತರು ಸರಕಾರದ ಯೋಜನೆಗಳನ್ನು ಅವಲಂಬಿಸಿರುವುದರಿಂದ, ನಿಗಮ ರದ್ಧತಿಯಿಂದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕ್ರೈಸ್ತರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಅವರು ತಿಳಿಸಿದರು.

ಆದುದರಿಂದ ಸರಕಾರ ಆದಷ್ಟು ಶೀಘ್ರವಾಗಿ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಅಲ್ಲದೆ ಈವರೆಗೆ ಕ್ರೈಸ್ತರಿಗೆ ದೊರಕುತ್ತಿದ್ದ ಸವಲತ್ತುಗಳೊಂದಿಗೆ ಅಲ್ಪಸಂಖ್ಯಾತ ಇಲಾಖೆಯಿಂದ ನ್ಯಾಯಯುತವಾಗಿ ದೊರಕಬೇಕಾಗಿದ್ದ ಸೌಲಭ್ಯಗಳನ್ನೂ ಕೂಡ ಈ ನಿಗಮದ ಅಡಿಯಲ್ಲಿ ಸಿಗುವಂತೆ ಮಾಡಬೇಕು. 2012ರಲ್ಲಿ ಯಡಿಯೂರಪ್ಪ ಅವರೇ ಕ್ರೈಸ್ತ ಅಭಿವೃದ್ಧಿ ಸಮಿತಿಯನ್ನು ರಚಿಸಿ 50ಕೋಟಿ ರೂ. ಅನುದಾನವನ್ನು ನೀಡಿದ್ದರು. ಇದೀಗ ಅವರೇ ಘೋಷಿಸಿದ ನಿಗಮವನ್ನು ಅವರೇ ಏಕಾಏಕಿ ರದ್ದು ಮಾಡಿದ್ದಾರೆ. ಈ ಸಂಬಂಧ ಸದ್ಯವೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ರೊಬರ್ಟ್ ಮಿನೇಜಸ್, ಕರ್ನಾಟಕ ಕ್ರೈಸ್ತ ಸಂಘ ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ.ನೇರಿ ಕರ್ನೆಲಿಯೋ, ಗೌರವಾಧ್ಯಕ್ಷ ಲೂವಿಸ್ ಲೋಬೊ, ಉಡುಪಿ ಸೈಂಟ್ ಮೇರಿಸ್ ಒರ್ಥೋಡೋಕ್ಸ್ ಸಿರಿಯನ್ ಚರ್ಚ್‌ನ ಟ್ರಸ್ಟಿ ತೋಮಸ್ ಸುವಾರಿಸ್, ಕಾರ್ಯದರ್ಶಿ ಆ್ಯಲನ್ ರೋಹನ್ ವಾಝ್, ಕೆಥೋಲಿಕ್ ಸಭಾ ಮಾಜಿ ಅಧ್ಯಕ್ಷ ಆಲ್ವಿನ್ ಕ್ವಾಡ್ರಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News