'ಪತ್ರಕರ್ತ ಸಿದ್ದೀಕ್ ಕಪ್ಪನ್ ಪಿಎಫ್‌ಐ ಕಾರ್ಯದರ್ಶಿ, ಹತ್ರಸ್‌ನಲ್ಲಿ ಅಶಾಂತಿ ಸೃಷ್ಟಿಸಲು ತನ್ನ ಐಡಿ ಬಳಸಿದ್ದರು'

Update: 2020-11-20 14:55 GMT

ಲಕ್ನೊ, ನ.20: ‘ಹತ್ರಸ್ ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿಯಾಗಲು ತೆರಳುತ್ತಿದ್ದ ಸಂದರ್ಭ ಬಂಧನಕ್ಕೊಳಗಾದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯ ಕಾರ್ಯದರ್ಶಿಯಾಗಿದ್ದರು. ಹತ್ರಸ್‌ನಲ್ಲಿ ಸಾಮಾಜಿಕ ಅಶಾಂತಿ ಸೃಷ್ಟಿಸಲು, 2018ರಲ್ಲಿ ಅವಧಿ ಮುಗಿದಿದ್ದ ಪತ್ರಕರ್ತರ ಗುರುತು ಚೀಟಿಯನ್ನು ಬಳಸಿದ್ದರು’ ಎಂದು ಉತ್ತರಪ್ರದೇಶ ಸರಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಪ್ಪನ್ ಬಂಧನವನ್ನು ಪ್ರಶ್ನಿಸಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸುವಂತೆ ಸೋಮವಾರ ಸುಪ್ರೀಂಕೋರ್ಟ್ ಉತ್ತರಪ್ರದೇಶ ಸರಕಾರ ಹಾಗೂ ರಾಜ್ಯ ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ನ್ಯಾಯಪೀಠಕ್ಕೆ ಶುಕ್ರವಾರ ಅಫಿಡವಿಟ್ ಸಲ್ಲಿಸಿದೆ. ‘ಬಂಧನದಲ್ಲಿರುವ ಸಿದ್ದೀಕ್ ಕಪ್ಪನ್ ಎಂಬ ವ್ಯಕ್ತಿಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ಕಾರ್ಯದರ್ಶಿಯಾಗಿದ್ದಾರೆ. ಕೇರಳ ಮೂಲದ ‘ತೇಜಸ್’ ಎಂಬ ದಿನಪತ್ರಿಕೆಯ ಗುರುತುಚೀಟಿ(2018ರಲ್ಲಿ ವಾಯಿದೆ ಮುಗಿದಿದೆ)ಯನ್ನು ಬಳಸಿಕೊಂಡು ಪತ್ರಕರ್ತರೆಂಬ ಸೋಗಿನಲ್ಲಿ ಪಿಎಫ್‌ಐ ಕಾರ್ಯಕರ್ತರು ಹಾಗೂ ಪಿಎಫ್‌ಐ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮುಖಂಡರೊಂದಿಗೆ ಜಾತಿವಿಭಜನೆ ಸೃಷ್ಟಿಸಲು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವ ದೃಢನಿಶ್ಚಯದೊಂದಿಗೆ ಹತ್ರಸ್‌ಗೆ ತೆರಳುತ್ತಿದ್ದರು’ ಎಂದು ಅಫಿಡವಿಟ್ ತಿಳಿಸಿದೆ.

ಕಪ್ಪನ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ‘ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ. ಬಂಧನದಲ್ಲಿರುವ ಕಪ್ಪನ್‌ರನ್ನು ಭೇಟಿಯಾಗಲು ವಕೀಲರಿಗೆ ಅಥವಾ ಕುಟುಂಬದ ಸದಸ್ಯರಿಗೆ ಅವಕಾಶ ನೀಡಿಲ್ಲ ಎಂದು ಅರ್ಜಿ ತಿಳಿಸಿದೆ. ಆದರೆ, ಸಂಬಂಧಿಗಳನ್ನು ಭೇಟಿ ಮಾಡುವ ಇಚ್ಛೆಯನ್ನು ಕಪ್ಪನ್ ವ್ಯಕ್ತಪಡಿಸಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಕಪ್ಪನ್‌ರ ಫೋನ್‌ನ ಕರೆ ದಾಖಲೆಯನ್ನು ಪರಿಶೀಲಿಸಿದಾಗ ಅವರು ನವೆಂಬರ್ 2, 11 ಮತ್ತು 17ರಂದು ವಕೀಲರೊಂದಿಗೆ ಸಂಭಾಷಣೆ ನಡೆದಿರುವುದು ಸ್ಪಷ್ಟವಾಗಿದೆ’ ಎಂದು ವಾದ ಮಂಡಿಸಿದರು. ಕಪ್ಪನ್‌ರನ್ನು ಅಕ್ರಮವಾಗಿ ಬಂಧಿಸಿಟ್ಟಿಲ್ಲ. ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ವಕೀಲರು ಕಪ್ಪನ್‌ರನ್ನು ಭೇಟಿಯಾಗುವುದಕ್ಕೆ ಸರಕಾರದ ಕಡೆಯಿಂದ ಯಾವುದೇ ಆಕ್ಷೇಪಣೆಯಿಲ್ಲ ಎಂದು ಮೆಹ್ತಾ ಹೇಳಿದರು. ಉತ್ತರಪ್ರದೇಶ ಸರಕಾರದ ಉತ್ತರಕ್ಕೆ ಪ್ರತಿಕ್ರಿಯಿಸಲು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಹೆಚ್ಚಿನ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ , ನ್ಯಾಯಾಲಯ ಮುಂದಿನ ವಾರ ವಿಚಾರಣೆಗೆ ದಿನ ನಿಗದಿಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News