ಸರಕಾರದ ನೀತಿಗಳು ಬಂಡವಾಳಗಾರರನ್ನು ಬೆಳೆಸುವ 'ಆತ್ಮನಿರ್ಭರ್ ಭಾರತ': ಎಚ್.ನರಸಿಂಹ

Update: 2020-11-20 14:58 GMT

ಕುಂದಾಪುರ, ನ.20: ಎಪಿಎಂಸಿ ತಿದ್ದುಪಡಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ, ರೈಲ್ವೆ ಖಾಸಗೀಕರಣ, ವಿದ್ಯುತ್ ಖಾಸಗೀಕರಣ, ಕಲ್ಲಿದ್ದಲು, ತೈಲ ಖಾಸಗೀಕರಣವು ದೇಶದ ದೊಡ್ಡ ಬಂಡವಾಳಗಾರರನ್ನು ಬೆಳೆಸುವ ಆತ್ಮ ನಿರ್ಭರ್ ಭಾರತವೇ ಹೊರತು ದೇಶದ ಸಾಮಾನ್ಯ ಜನರ ಆದಾಯ ಹೆಚ್ಚಿಸುವ ನೀತಿಗಳಲ್ಲ ಎಂದು ಜೆಸಿಟಿಯು ಮುಖಂಡ ಎಚ್.ನರಸಿಂಹ ಆರೋಪಿಸಿದ್ದಾರೆ.

ಕುಂದಾಪುರದ ಹೆಂಚು ಕಾರ್ಮಿಕರ ಭವನದಲ್ಲಿ ಇಂದು ನಡೆದ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು. ಕೇಂದ್ರ ಸರಕಾರ ತಂದಿರುವ 11 ಸುಗ್ರೀವಾಜ್ಞೆಗಳು ನೇರವಾಗಿ ದುಡಿಯುವ ಜನರ ಆದಾಯದ ಮೇಲೆ ದುಷ್ಪರಿಣಾಮಗಳು ಬೀರಲಿವೆ. ಜನರ ಕಷ್ಟಗಳಿಗೆ ಧಾವಿಸಬೇಕಾದ ಸರಕಾರ ದುಡಿಯುವ ಜನರಿಗಿರುವ ಕಾರ್ಮಿಕ ಕಾನೂನುಗಳನ್ನು ಕೂಡ ತಿದ್ದುಪಡಿ ಮಾಡಿದೆ ಮತ್ತು ಸಬ್ಸಿಡಿಗಳನ್ನು ಕಸಿದುಕೊಂಡಿದೆ ಎಂದು ಅವರು ದೂರಿದರು.

ಜೆಸಿಟಿಯು ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ 50 ವರ್ಷ ಗುತ್ತಿಗೆಗೆ ನೀಡಿದ್ದು, ಇಲ್ಲಿನ ರೈತರಿಂದ, ಸಣ್ಣ ವ್ಯಾಪಾರಿಗಳಿಂದ ಆರಂಭವಾದ 3 ರಾಷ್ಟ್ರೀಕೃತ ಬ್ಯಾಂಕುಗಳನು ದೇಶ ಮತ್ತು ವಿದೇಶದ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ವಿಲೀನ ಮಾಡಲಾಗಿದೆ. ಈ ಮೂಲಕ ಸರಕಾರ ಇಲ್ಲಿನ ಜನರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.

ಕಟ್ಟಡ ಕಾರ್ಮಿಕರ ಕಾನೂನು ತಿದ್ದುಪಡಿ, ಕೈಗಾರಿಕ ಕಾಯ್ದೆ ತಿದ್ದುಪಡಿಗಳಿಂದ ಜನರ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಲಿದೆ. ಕಟ್ಟಡ, ಆಟೋರಿಕ್ಷಾ ಸಾರಿಗೆ ಚಾಲಕರಿಗೆ ಘೋಷಿಸಿದ ಕೋವಿಡ್ ಪರಿಹಾರಗಳು ಹಾಗೂ ಮರಳು ಸಮಸ್ಯೆ ಯನ್ನು ಬಗೆಹರಿಸದೆ ಸರಕಾರ ವಂಚಿಸಿದೆ. ಹೀಗಾಗಿ ನ.26ರಂದು ನಡೆಯುವ ಮುಷ್ಕರ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ದಾಖಲು ಮಾಡುವ ಮುಷ್ಕರವಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಮಹಾಬಲ ವಡೇರ ಹೋಬಳಿ ವಹಿಸಿದ್ದರು. ಜೆಸಿಟಿಯು ಜಿಲ್ಲಾ ಮುಖಂಡ ಕೆ.ಶಂಕರ್, ಆಟೋ ರಿಕ್ಷಾ ಟ್ಯಾಕ್ಸಿ ಮೆಟಡೋರ್ ಡ್ರೈವರ್ಸ್‌ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಮಾಣಿ ಉದಯ ಕುಮಾರ್, ಇಂಟಕ್ ಕಾರ್ಮಿಕ ಸಂಘದ ಶಶಿರಾಜ್, ರೋಶನ್ ಶೆಟ್ಟಿ, ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು, ವಿದ್ಯುತ್ ಕಾರ್ಮಿಕರ ಸಂಘದ ಮುಖಂಡರಾದ ವೆಂಕಟೇಶ್ ಕುಂದಾಪುರ ಉಪಸ್ಥಿತರಿದ್ದರು. ಆಟೋ ರಿಕ್ಷಾ ಚಾಲಕರ ಸಂಘಟನೆಯ ರಾಜು ದೇವಾಡಿಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News