×
Ad

​ಕೇಂದ್ರೀಯ ಏಜೆನ್ಸಿಗಳು ರಾಜಕೀಯ ಅಂಗಗಳಂತೆ ವರ್ತಿಸುತ್ತಿವೆ: ಸಿಪಿಎಂ

Update: 2020-11-20 20:31 IST

ಉಡುಪಿ: ಜಾರಿ ನಿರ್ದೇಶನಾಲಯ(ಇ.ಡಿ.) ಮತ್ತು ಇತರ ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ಕೇರಳದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಲ್‌ಡಿಎಫ್ ಸರಕಾರವನ್ನು ಅಸ್ಥಿರಗೊಳಿಸಲು ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಗುರಿಯಿಡಲು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.

ಚಿನ್ನ ಕಳ್ಳಸಾಗಾಣಿಕೆಯ ಮೂಲಕ ಪಡೆದ ಹಣವನ್ನು ರಾಷ್ಟ್ರ-ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಆಪಾದನೆಯ ಬಗ್ಗೆ ಯು.ಎ.ಪಿ.ಎ. ಅಡಿಯಲ್ಲಿ ನಡೆಯುತ್ತಿರುವ ಕೇಂದ್ರೀಯ ತನಿಖೆಗಳನ್ನು, ಅಪರಾಧಿಗಳನ್ನು ಶಿಕ್ಷಿಸುವ ಬದಲಾಗಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಕೇರಳ ದಲ್ಲಿನ ಆಳುವ ಎಲ್‌ಡಿಎಫ್ ಸರಕಾರದ ರಾಜಕೀಯ ಮುಖಂಡತ್ವಕ್ಕೆ ಮಸಿ ಬಳಿಯಲು ಬಳಸಲಾಗುತ್ತಿದೆ ಎಂದು ಸಮಿತಿ ದೂರಿದೆ.

ಬಿಜೆಪಿ ಕೇಂದ್ರ ಸರಕಾರ ಕೇಂದ್ರೀಯ ಏಜೆನ್ಸಿಗಳನ್ನು ಭಾರತೀಯ ಸಂವಿ ಧಾನದ ಮೂಲ ತತ್ವಗಳನ್ನು ಶಿಥಿಲಗೊಳಿಸಲು ಮತ್ತು ಇಂತಹ ಅಸಂವಿಧಾನಿಕ ಸಾಧನಗಳ ಮೂಲಕ ತಮ್ಮ ರಾಜಕೀಯ ಹಿತಗಳನ್ನು ಈಡೇರಿಸಿಕೊಳ್ಳಲು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕೇರಳದ ಜನತೆ ರಾಜ್ಯ ದಲ್ಲಿ ಪರಸ್ಪರ ಕೈಜೋಡಿಸಿ ಕೆಲಸ ಮಾಡುತ್ತಿರುವ ಬಿಜೆಪಿ ಮತ್ತು ಯುಡಿಎಫ್‌ನ ಕುತಂತ್ರಗಳಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News