ಭಾರೀ ಚಳಿಗೆ ನಡುಗಿದ ದಿಲ್ಲಿ

Update: 2020-11-20 15:17 GMT

ಹೊಸದಿಲ್ಲಿ, ನ.20: ದಿಲ್ಲಿಯಲ್ಲಿ ಶುಕ್ರವಾರ ಬೆಳಿಗ್ಗೆ ಕನಿಷ್ಟ ತಾಪಮಾನ 7.5 ಡಿಗ್ರಿ ಸೆಲ್ಶಿಯಸ್‌ಗೆ ಇಳಿದಿದ್ದು, ಇದು ಕಳೆದ 14 ವರ್ಷಗಳಲ್ಲಿ ನವೆಂಬರ್‌ನ ಅತ್ಯಧಿಕ ಚಳಿಯ ದಿನವಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 2006ರ ನವೆಂಬರ್ 29ರಂದು ದಿಲ್ಲಿ ನಗರದಲ್ಲಿ 7.3 ಡಿಗ್ರಿ ಸೆಲ್ಶಿಯಸ್ ಕನಿಷ್ಟ ತಾಪಮಾನ ದಾಖಲಾಗಿದ್ದರೆ, ಆ ಬಳಿಕದ 14 ವರ್ಷಗಳಲ್ಲಿ ನವೆಂಬರ್‌ನಲ್ಲಿ ದಾಖಲಾಗಿರುವ ಕನಿಷ್ಟ ತಾಪಮಾನ ಇದಾಗಿದೆ .

ಶುಕ್ರವಾರ ದಿಲ್ಲಿಯಲ್ಲಿ ಕನಿಷ್ಟ ತಾಪಮಾನ 7.5 ಡಿಗ್ರಿ ಸೆಲ್ಶಿಯಸ್ ಆಗಿತ್ತು. ಜೊತೆಗೆ ದಿಲ್ಲಿಯಲ್ಲಿ ಶೀತ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುನ್ಸೂಚನೆ ವಿಭಾಗದ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ ಹೇಳಿದ್ದಾರೆ. ನಿರಂತರ ಎರಡು ದಿನ ಕನಿಷ್ಟ ತಾಪಮಾನ 10 ಡಿಗ್ರಿ ಸೆಲ್ಶಿಯಸ್ ಅಥವಾ ಕಡಿಮೆಯಿದ್ದರೆ ಅಥವಾ ಸಾಮಾನ್ಯ ಮಟ್ಟಕ್ಕಿಂತ 4.5 ಡಿಗ್ರಿ ಸೆಲ್ಶಿಯಸ್ ಕಡಿಮೆ ದಾಖಲಾದರೆ ಅದು ಶೀತಗಾಳಿಯ ಮುನ್ಸೂಚನೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ದಿಲ್ಲಿಯಲ್ಲಿ ಕನಿಷ್ಟ ತಾಪಮಾನ 11.5 ಡಿಗ್ರಿ ಸೆಲ್ಶಿಯಸ್, 2018ರ ನವೆಂಬರ್‌ನಲ್ಲಿ 10.5 ಡಿಗ್ರಿ ಸೆಲ್ಶಿಯಸ್ ಹಾಗೂ 2017ರ ನವೆಂಬರ್‌ನಲ್ಲಿ 7.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. 1938ರ ನವೆಂಬರ್ 28ರಂದು ದಿಲ್ಲಿಯ ಕನಿಷ್ಟ ತಾಪಮಾನ 3.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿರುವುದು ನವೆಂಬರ್ ತಿಂಗಳಿಗೆ ಸಂಬಂಧಿಸಿ ಸಾರ್ವಕಾಲಿಕ ದಾಖಲೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News