2021 ಎಪ್ರಿಲ್‌ನಲ್ಲಿ ಆಕ್ಸ್ ಫರ್ಡ್ ಲಸಿಕೆ ಲಭ್ಯ, ಡೋಸ್‌ಗೆ 1 ಸಾವಿರ ರೂಪಾಯಿ: ಅದಾರ್ ಪೂನಾವಾಲ

Update: 2020-11-20 15:42 GMT
ಫೋಟೊ ಕೃಪೆ:twitter.com

ಹೊಸದಿಲ್ಲಿ, ನ. 20: ಆಕ್ಸ್‌ಫರ್ಡ್‌ನ ಕೋವಿಡ್-19 ಲಸಿಕೆ 2021 ಫೆಬ್ರವರಿ ಹೊತ್ತಿಗೆ ಆರೋಗ್ಯ ಸೇವಾ ಕಾರ್ಯಕರ್ತರು ಹಾಗೂ ವೃದ್ಧರಿಗೆ ಲಭ್ಯವಾಗಲಿದೆ ಎಂದು ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲ ತಿಳಿಸಿದ್ದಾರೆ.

 ಲಸಿಕೆ ಸಾರ್ವಜನಿಕರಿಗೆ ಎಪ್ರಿಲ್ ಹೊತ್ತಿಗೆ ಲಭ್ಯವಾಗಲಿದೆ. ಅಂತಿಮ ಟ್ರಯಲ್‌ನ ಫಲಿತಾಂಶ ಹಾಗೂ ನಿಯಂತ್ರಕರ ಅನುಮೋದನೆ ಅವಲಂಬಿಸಿ ಸಾರ್ವಜನಿಕರಿಗೆ ಎರಡು ಅಗತ್ಯದ ಡೋಸ್‌ಗಳಿಗೆ ಗರಿಷ್ಠ 1 ಸಾವಿರ ರೂಪಾಯಿ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ನ ನಾಯಕತ್ವ ಶೃಂಗದಲ್ಲಿ ಮಾತನಾಡಿದ ಪೂನಾವಾಲ, ಬಹುಶಃ ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಲಭ್ಯವಾಗಲು ಮೂರ್ನಾಲ್ಕು ವರ್ಷಗಳು ಬೇಕಾಗಬಹುದು. ಇದಕ್ಕೆ ಪೂರೈಕೆ ನಿರ್ಬಂಧಗಳು ಮಾತ್ರ ಕಾರಣವಾಗದು. ಯಾಕೆಂದರೆ, ಇದಕ್ಕೆ ಬಜೆಟ್, ಲಸಿಕೆ, ಮೂಲ ಸೌಕರ್ಯಗಳು ಬೇಕು. ಅಲ್ಲದೆ, ಜನರು ಲಸಿಕೆ ತೆಗೆದುಕೊಳ್ಳಲು ಸಿದ್ಧರಿರಬೇಕು. ಆದುದರಿಂದ ಜನಸಂಖ್ಯೆಯ ಶೇ. 80ರಿಂದ 90 ಜನರು ಲಸಿಕೆ ತೆಗೆದುಕೊಳ್ಳಲು ಈ ಎಲ್ಲ ಅಂಶಗಳು ಕಾರಣವಾಗಲಿದೆ ಎಂದು ಅವರು ಹೇಳಿದರು. ಭಾರತ ಸರಕಾರ 3 ರಿಂದ 4 ಡಾಲರ್‌ಗಳಿಗೆ ಈ ಲಸಿಕೆಯನ್ನು ಪಡೆಯಲಿದೆ. ಸಾರ್ವಜನಿಕರು 2 ಡೋಸ್ ಲಸಿಕೆಯನ್ನು 5 ರಿಂದ 6 ಡಾಲರ್ (1 ಸಾವಿರ ರೂಪಾಯಿ)ಗೆ ಪಡೆಯಲಿದ್ದಾರೆ. ಇಷ್ಟು ಕಡಿಮೆ ಬೆಲೆಗೆ ಲಭ್ಯವಾಗಲು ಸರಕಾರ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿರುವುದು ಕಾರಣ. ಔಷಧ ಮಾರುಕಟ್ಟೆಯಲ್ಲಿ ಲಭ್ಯ ಇರುವ ಇತರ ಲಸಿಕೆಗಳಿಗೆ ಹೋಲಿಸಿದರೆ ಈ ಲಸಿಕೆ ತುಂಬಾ ಅಗ್ಗ ಹಾಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

 ಲಸಿಕೆಯ ಪರಿಣಾಮದ ಬಗ್ಗೆ ಮಾತನಾಡಿದ ಪೂನಾವಾಲ, ಈ ಲಸಿಕೆ ಇದುವರೆಗೆ ವೃದ್ಧರೂ ಸೇರಿದಂತೆ ಎಲ್ಲರಲ್ಲೂ ಉತ್ತಮ ಕಾರ್ಯ ನಿರ್ವಹಣೆಯನ್ನು ಸಾಬೀತುಪಡಿಸಿದೆ. ಲಸಿಕೆ ದೀರ್ಘಾವಧಿಯ ರೋಗ ನಿರೋಧಕ ಶಕ್ತಿ ಹಾಗೂ ಪ್ರತಿಕಾಯದ ಸೂಚಕವಾಗಿರುವ ಉತ್ತಮ ಟಿ-ಸೆಲ್‌ಗಳನ್ನು ಉತ್ತೇಜಿಸುತ್ತದೆ. ಆದರೂ, ಈ ಲಸಿಕೆ ನಮ್ಮನ್ನು ದೀರ್ಘ ಕಾಲ ರಕ್ಷಿಸುತ್ತದೆ ಎಂದು ಹೇಳಲು ದೀರ್ಘ ಸಮಯ ಬೇಕಾಗಬಹುದು ಎಂದರು. ಸುರಕ್ಷಾ ಆಯಾಮದ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅದಾರ್ ಪೂನಾವಾಲ, ಅಡ್ಡ ಪರಿಣಾಮದ ಬಗ್ಗೆ ಯಾವುದೇ ಪ್ರಮುಖ ದೂರು ಬಂದಿಲ್ಲ. ನಾವು ಕಾದು ನೋಡಬೇಕಾಗಿದೆ. ಭಾರತೀಯರ ಮೇಲೆ ನಡೆಸಿದ ಕ್ಲಿನಿಕಲ್ ಟ್ರಯಲ್‌ನ ಫಲಿತಾಂಶ ಒಂದೂವರೆ ತಿಂಗಳಲ್ಲಿ ಬರಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News