ಸಿಬಿಐ ಬಿಜೆಪಿ ಸರಕಾರದ ‘ಪಾನ್ ಅಂಗಡಿ’ ಎಂದ ಮಹಾರಾಷ್ಟ್ರ ಸಚಿವ

Update: 2020-11-20 16:48 GMT
ಫೋಟೊ ಕೃಪೆ: facebook.com

ಮುಂಬೈ, ನ. 20: ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆ ನಡೆಸಲು ರಾಜ್ಯ ಸರಕಾರದ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿರುವ ಮಹಾರಾಷ್ಟ್ರ ಸಚಿವ ಅಸ್ಲಾಂ ಶೇಖ್, ಸಿಬಿಐ ಕೇಂದ್ರದ ಬಿಜೆಪಿ ಸರಕಾರದ ಅಡಿಯಲ್ಲಿ ಇರುವ ಪಾನ್ ಅಂಗಡಿಯಾಗಿ ಮಾರ್ಪಟ್ಟಿದೆ ಎಂದಿದ್ದಾರೆ.

 ‘‘ಸಿಬಿಐ ಬಿಜೆಪಿ ಸರಕಾರದ ಅಡಿಯಲ್ಲಿರುವ ಪಾನ್ ಅಂಗಡಿಯಂತಾಗಿದೆ. ಅದು ಎಲ್ಲಿ ಕೂಡ ಹೋಗಬಹುದು. ಯಾರ ಮೇಲೂ ಪ್ರಕರಣ ದಾಖಲಿಸಬಹುದು. ಮುಖ್ಯವಾಗಿ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ದೂರು ದಾಖಲಿಸಬಹುದು. ಅದು ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬಬಹುದು’’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ರಾಜ್ಯಗಳಲ್ಲಿ ಸಿಬಿಐ ತನಿಖೆ ನಡೆಸಲು ರಾಜ್ಯ ಸರಕಾರದ ಅನುಮತಿ ಅಗತ್ಯ ಹಾಗೂ ರಾಜ್ಯಗಳ ಅನುಮತಿ ಇಲ್ಲದೆ, ಕೇಂದ್ರ ಸರಕಾರ ಸಿಬಿಐ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವಂತಿಲ್ಲ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿತ್ತು. ಉತ್ತರಪ್ರದೇಶದ ಭ್ರಷ್ಟಾಚಾರ ಪ್ರಕರಣದ ಆರೋಪಿಯ ಅರ್ಜಿಯ ಬಗ್ಗೆ ತೀರ್ಪು ನೀಡಿದ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ, ರಾಜ್ಯ ಸರಕಾರದ ಅನುಮತಿ ಇಲ್ಲದೆ, ರಾಜ್ಯಗಳಲ್ಲಿ ಸಿಬಿಐ ತನಿಖೆ ನಡೆಸುವಂತಿಲ್ಲ ಎಂದು ಹೇಳಿತು. ತಮ್ಮ ರಾಜ್ಯಗಳಲ್ಲಿ ಸಿಬಿಐ ತನಿಖೆ ನಡೆಸಲು ‘ಸಾಮಾನ್ಯ ಒಪ್ಪಿಗೆ’ಯನ್ನು ಪಂಜಾಬ್, ಪಶ್ಚಿಮಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಛತ್ತೀಸ್‌ಗಢ ಸರಕಾರಗಳು ಇತ್ತೀಚೆಗೆ ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪು ಮಹತ್ವ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News