ಶರ್ಜೀಲ್ ಇಮಾಂ, ಉಮರ್ ಖಾಲಿದ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Update: 2020-11-20 16:39 GMT

ಹೊಸದಿಲ್ಲಿ,ನ.20: ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ದಿಲ್ಲಿ ಹಿಂಸಾಚಾರ ಪ್ರಕರಣದ ಆರೋಪಿಗಳಾದ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಸಂಶೋಧನಾ ವಿದ್ಯಾರ್ಥಿ ಶರ್ಜೀಲ್ ಇಮಾಂ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನ.23ರವರೆಗೆ ವಿಸ್ತರಿಸಿದೆ.

ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಬಂಧಿತರಾಗಿರುವ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಕೊನೆಗೊಂಡಿದ್ದರಿಂದ ಶುಕ್ರವಾರ ಅವರನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾ.ಅಮಿತಾಭ್ ರಾವತ್ ಅವರ ಎದುರು ಹಾಜರು ಪಡಿಸಲಾಗಿತ್ತು.

ದಂಗೆಗಳನ್ನು ಪ್ರಚೋದಿಸಲು ಖಾಲಿದ್ ಮತ್ತು ಶರ್ಜೀಲ್ ‘ಒಳಸಂಚು’ ರೂಪಿಸಿದ್ದರು ಎಂಬ ಆರೋಪಕ್ಕೆ ಪ್ರಕರಣವು ಸಂಬಂಧಿಸಿದೆ. ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರದಲ್ಲಿ 53 ಜನರು ಮೃತಪಟ್ಟಿದ್ದರು ಮತ್ತು 748 ಜನರು ಗಾಯಗೊಂಡಿದ್ದರು. ಕೋಮು ಹಿಂಸಾಚಾರವು ಖಾಲಿದ್ ಮತ್ತು ಇತರರು ರೂಪಿಸಿದ್ದ ಪೂರ್ವಯೋಜಿತ ಒಳಸಂಚು ಆಗಿತ್ತು ಎಂದು ಪೊಲೀಸರು ಪ್ರಕರಣದಲ್ಲಿ ಆರೋಪಿಸಿದ್ದಾರೆ.

ನ.6ರಂದು ದಿಲ್ಲಿ ಸರಕಾರವು ಖಾಲಿದ್ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ದಿಲ್ಲಿ ಪೊಲೀಸರಿಗೆ ಅನುಮತಿ ನೀಡಿತ್ತು. ಗೃಹ ಸಚಿವಾಲಯದ ಅನುಮತಿಯನ್ನೂ ಪಡೆದುಕೊಂಡಿರುವ ಪೊಲೀಸರು ಈಗ ತಮ್ಮ ಪೂರಕ ಆರೋಪಪಟ್ಟಿಯಲ್ಲಿ ಖಾಲಿದ್‌ರನ್ನು ಹೆಸರಿಸಬಹುದಾಗಿದೆ.

ಯುಎಪಿಎದ ಕಲಂ 13ರಡಿ ಆರೋಪಿಯ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಪೊಲೀಸರಿಗೆ ಗೃಹ ಸಚಿವಾಲಯ ಮತ್ತು ದಿಲ್ಲಿ ಸರಕಾರದ ಮಂಜೂರಾತಿ ಅಗತ್ಯವಿದೆ.

ದಂಗೆಗಳ ಸಂದರ್ಭದಲ್ಲಿ ಹಿಂಸಾಚಾರವನ್ನು ಹರಡಿದ್ದಕ್ಕಾಗಿ ದಿಲ್ಲಿ ಪೊಲೀಸರು 15 ವ್ಯಕ್ತಿಗಳ ವಿರುದ್ಧ ಯುಎಪಿಎ,ಶಸ್ತ್ರಾಸ್ತ್ರಗಳ ಕಾಯ್ದೆ ಮತ್ತು ಐಪಿಸಿಯಡಿ 17,500 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News