ಸೋನಿಯಾರಿಂದ ಆರ್ಥಿಕ, ವಿದೇಶ ವ್ಯವಹಾರಗಳು, ರಾಷ್ಟ್ರೀಯ ಭದ್ರತೆ ಕುರಿತು ಮೂರು ಸಮಿತಿಗಳ ರಚನೆ

Update: 2020-11-20 16:42 GMT

ಹೊಸದಿಲ್ಲಿ,ನ.20: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಆರ್ಥಿಕ ವ್ಯವಹಾರಗಳು,ವಿದೇಶಾಂಗ ವ್ಯವಹಾರಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನೀತಿ ವಿಷಯಗಳನ್ನು ಚರ್ಚಿಸಲು ಮೂರು ಪ್ರತ್ಯೇಕ ಸಮಿತಿಗಳನ್ನು ರಚಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಎಲ್ಲ ಮೂರೂ ಸಮಿತಿಗಳ ಸದಸ್ಯರಾಗಿದ್ದಾರೆ.

ಆರ್ಥಿಕ ವ್ಯವಹಾರಗಳ ಕುರಿತ ಸಮಿತಿಯು ಮಾಜಿ ವಿತ್ತಸಚಿವ ಪಿ.ಚಿದಂಬರಂ,ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ದಿಗ್ವಿಜಯ ಸಿಂಗ್ ಅವರನ್ನೂ ಒಳಗೊಂಡಿದ್ದು, ಜೈರಾಮ್ ರಮೇಶ್ ಅವರು ಸಂಚಾಲಕರಾಗಿದ್ದಾರೆ. ವಿದೇಶಾಂಗ ವ್ಯವಹಾರಗಳ ಕುರಿತ ಸಮಿತಿಯು ಆನಂದ್ ಶರ್ಮಾ, ಶಶಿ ತರೂರ್ ಮತ್ತು ಸಪ್ತಗಿರಿ ಉಲಕಾ ಅವರನ್ನೊಳಗೊಂಡಿದ್ದು,ಸಲ್ಮಾನ್ ಖುರ್ಷಿದ್ ಅವರು ಸಂಚಾಲಕರಾಗಿದ್ದಾರೆ.

ರಾಷ್ಟ್ರೀಯ ಭದ್ರತೆ ಕುರಿತು ಸಮಿತಿಯು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್,ಪಕ್ಷದ ನಾಯಕರಾದ ವೀರಪ್ಪ ಮೊಯ್ಲಿ ಮತ್ತು ವಿ.ವೈದ್ಯಲಿಂಗಂ ಅವರನ್ನೊಳಗೊಂಡಿದ್ದು,ವಿನ್ಸೆಂಟ್ ಎಚ್.ಪಾಲಾ ಅವರು ಸಂಚಾಲಕರಾಗಿದ್ದಾರೆ.

ಸಮಿತಿಗಳಲ್ಲಿರುವ ಗುಲಾಂ ನಬಿ ಆಝಾದ್,ಆನಂದ ಶರ್ಮಾ,ವೀರಪ್ಪ ಮೊಯ್ಲಿ ಮತ್ತು ಶಶಿ ತರೂರ್ ಅವರು ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಮರುರಚನೆಯನ್ನು ಆಗ್ರಹಿಸಿ ಪತ್ರ ಬರೆದಿದ್ದ 23 ನಾಯಕರಲ್ಲಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News