ಭಾರತ: 9 ಮಿಲಿಯ ದಾಟಿದ ಕೊರೋನ ಸೋಂಕು ಪ್ರಕರಣ

Update: 2020-11-20 16:45 GMT

ಹೊಸದಿಲ್ಲಿ, ನ.20: ದೇಶದಲ್ಲಿ ಕೊರೋನ ಸೋಂಕು ಪ್ರಕರಣದ ಸಂಖ್ಯೆ 9 ಮಿಲಿಯದ ಗಡಿ ದಾಟಿದೆ. ಈ ಮಧ್ಯೆ, ದೈನಂದಿನ ಸೋಂಕು ಪ್ರಕರಣದ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆಯಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಆಗಸ್ಟ್ ಮಧ್ಯಭಾಗದಲ್ಲಿ ಭಾರತದ ದೈನಂದಿನ ಪರೀಕ್ಷೆಯಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯ ಪ್ರಮಾಣ 25%ದಿಂದ 30%ದಷ್ಟಿದ್ದರೆ ಕಳೆದ ವಾರ ಇದು 49%ಕ್ಕೇರಿದೆ ಎಂದು ಸರಕಾರ ಹೇಳಿದೆ.

ಆದರೆ ದೇಶದ ಕೆಲವು ಜನನಿಬಿಡ ರಾಜ್ಯಗಳು ದೈನಂದಿನ ಸೋಂಕು ಪರೀಕ್ಷೆಯ ನಿಖರ ಅಂಕಿ ಅಂಶ ಪ್ರಕಟಿಸದಿರುವುದರಿಂದ ಅಧಿಕ ಬಾಧಿತ ಪ್ರದೇಶವನ್ನು ಸ್ಪಷ್ಟವಾಗಿ ಗುರುತಿಸಲು ಅಸಾಧ್ಯವಾಗಿದೆ. ನೀವು ಎಷ್ಟು ಪ್ರಕರಣಗಳನ್ನು ಗುರುತಿಸಿದ್ದೀರಿ ಎಂಬುದು ನಿಮ್ಮ ಪರೀಕ್ಷೆ ಎಷ್ಟು ಪರಿಣಾಮಕಾರಿ ಎಂಬುದನ್ನು ಅವಲಂಬಿಸಿದೆ . ನಗರ ಕೇಂದ್ರ ಮತ್ತು ನಗರ ಪ್ರದೇಶಗಳಲ್ಲಿ ಕೊರೋನ ಸೋಂಕು ಮತ್ತು ಪರೀಕ್ಷೆಗೆ ಸಂಬಂಧಿಸಿದ ಅತ್ಯುತ್ತಮ ಅಂಕಿಅಂಶ ನಮ್ಮಲ್ಲಿದೆ. ಆದರೆ ಗ್ರಾಮೀಣ ಪ್ರದೇಶಗಳಿಂದ ಇದೇ ರೀತಿಯ ಅಂಕಿ ಅಂಶ ಲಭಿಸುತ್ತಿಲ್ಲ ಎಂದು ಕೊಚ್ಚಿಯ ರಾಜಗಿರಿ ಕಾಲೇಜ್ ಆಫ್ ಸೋಶಿಯಲ್ ಸೈಯನ್ಸ್‌ನ ಪ್ರೊ ರಿಜೊ ಎಂ ಜಾನ್ ಹೇಳಿದ್ದಾರೆ.

ಕಡಿಮೆ ಪ್ರಮಾಣದ ಮತ್ತು ಕಡಿಮೆ ಗುಣಮಟ್ಟದ ಪರೀಕ್ಷೆ ಕೊರೋನ ಸೋಂಕಿನ ಕುರಿತ ಸ್ಪಷ್ಟ ಚಿತ್ರಣ ಲಭಿಸಲು ಯಾವ ರೀತಿ ತೊಡಕಾಗಿದೆ ಎಂಬುದಕ್ಕೆ ಬಿಹಾರ (100 ಮಿಲಿಯನ್‌ಗೂ ಹೆಚ್ಚಿನ ಜನಸಂಖ್ಯೆ ಹೊಂದಿದೆ) ಉತ್ತಮ ಉದಾಹರಣೆಯಾಗಿದೆ. ಈ ರಾಜ್ಯದಲ್ಲಿ ನಡೆಯುವ ಕೊರೋನ ಪರೀಕ್ಷೆಯ 88% ಪ್ರಮಾಣ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಾಗಿದೆ. ಇಲ್ಲಿ ಈ ತಿಂಗಳು ಚುನಾವಣೆ ನಡೆದಿದ್ದರೂ ದೈನಂದಿನ ಕೊರೋನ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ ದಾಖಲಾಗಿಲ್ಲ. ಗುರುವಾರ ಬಿಹಾರದಲ್ಲಿ ಕೇವಲ 604 ಹೊಸ ಸೋಂಕು ಪ್ರಕರಣ ದಾಖಲಾಗಿದೆ. ಆದರೆ ಬಿಹಾರಕ್ಕಿಂತ ದುಪ್ಪಟ್ಟು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶದಲ್ಲಿ 2,500 ಹೊಸ ಸೋಂಕು ಪ್ರಕರಣ ದಾಖಲಾಗಿದೆ.

ಇದಕ್ಕೆ ಹೋಲಿಸಿದರೆ, ಸುಮಾರು 16.8 ಮಿಲಿಯನ್ ಜನಸಂಖ್ಯೆ ಹೊಂದಿರುವ ಹೊಸದಿಲ್ಲಿಯಲ್ಲಿ ಗುರುವಾರ 6,900 ಹೊಸ ಪ್ರಕರಣ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News