ಮೇನಕಾ ಗಾಂಧಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ: ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Update: 2020-11-20 16:49 GMT

ಹೊಸದಿಲ್ಲಿ, ನ.20: ತನ್ನ ಹಾಗೂ ಇತರ ಇಬ್ಬರ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಆರೋಪದ ಪ್ರಕರಣದ ಸಮಾಪನಾ ವರದಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಬಿಜೆಪಿ ಸಂಸದೆ ಮೇನಕಾ ಗಾಂಧಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸುವಂತೆ ದಿಲ್ಲಿ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ. 

ಮೇನಕಾ ಗಾಂಧಿ ಹಾಗೂ ಇತರರು ಟ್ರಸ್ಟ್ ಒಂದಕ್ಕೆ ಅಕ್ರಮವಾಗಿ 50 ಲಕ್ಷ ರೂ. ಅನುದಾನ ಒದಗಿಸಿರುವುದಾಗಿ 2006ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ವಿಶೇಷ ಸಿಬಿಐ ನ್ಯಾಯಾಲಯ, ಜನಪ್ರತಿನಿಧಿಯಿಂದ ಕ್ರಿಮಿನಲ್ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುವುದರಿಂದ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. 2008ರಲ್ಲಿ ಸಿಬಿಐ ಸಲ್ಲಿಸಿದ್ದ ಪ್ರಕರಣದ ಸಮಾಪನಾ ವರದಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿ, ಹೆಚ್ಚಿನ ತನಿಖೆಯ ಅಗತ್ಯವನ್ನು ಒತ್ತಿ ಹೇಳಿತ್ತು. ಬಳಿಕ 2020ರ ಫೆಬ್ರವರಿಯಲ್ಲಿ ಸಿಬಿಐ ಮತ್ತೊಮ್ಮೆ ಸಮಾಪನಾ ವರದಿಯನ್ನು ಸಲ್ಲಿಸಿತ್ತು. ಆದರೆ ಇದನ್ನು ಮತ್ತೆ ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯ, ಹೆಚ್ಚಿನ ತನಿಖೆ ನಡೆಸುವಂತೆ ತಿಳಿಸಿತ್ತು. ಸಮಾಪನಾ ವರದಿಯನ್ನು ತಿರಸ್ಕರಿಸಿ ಹೆಚ್ಚಿನ ತನಿಖೆಗೆ ವಿಶೇಷ ನ್ಯಾಯಾಲಯ ಮತ್ತೊಮ್ಮೆ ಸೂಚಿಸಿರುವುದನ್ನು ಪ್ರಶ್ನಿಸಿ ಮೇನಕಾ ಗಾಂಧಿ ಹಾಗೂ ಇತರ ಇಬ್ಬರು ದಿಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News