ಜೈಷ್ ಉಗ್ರರ ಹತ್ಯೆಯಿಂದ ದೊಡ್ಡ ದಾಳಿಯ ಸಂಚು ಮತ್ತೊಮ್ಮೆ ವಿಫಲ: ಪ್ರಧಾನಿ ಮೋದಿ

Update: 2020-11-20 16:51 GMT

ಹೊಸದಿಲ್ಲಿ,ನ.20: ಜಮ್ಮು-ಕಾಶ್ಮೀರದಲ್ಲಿ ಗುರುವಾರ ಭದ್ರತಾ ಪಡೆಗಳಿಂದ ಜೈಷೆ ಮುಹಮ್ಮದ್ ಭಯೋತ್ಪಾದನ ಸಂಘಟನೆಗೆ ಸೇರಿದ ನಾಲ್ವರು ಉಗ್ರರ ಹತ್ಯೆಯ ಹಿನ್ನೆಲೆಯಲ್ಲಿ ಶುಕ್ರವಾರ ಕೇಂದ್ರ ಗೃಹಸಚಿವ ಅಮಿತ್ ಶಾ,ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಮತ್ತಿತರರೊಂದಿಗೆ ಪರಿಶೀಲನಾ ಸಭೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರಾಡಳಿತ ಪ್ರದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿಯನ್ನು ನಡೆಸುವ ಸಂಚು ಮತ್ತೊಮ್ಮೆ ವಿಫಲಗೊಂಡಿದೆ ಎಂದು ಹೇಳಿದ್ದಾರೆ. ಹತ್ಯೆಯಾದ ಉಗ್ರರ ಗುಂಪು ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಬೃಹತ್ ದಾಳಿಯನ್ನು ನಡೆಸಲು ಹೊಂಚು ಹಾಕುತ್ತಿತ್ತು ಎಂದು ತನಿಖೆಯು ಬೆಟ್ಟು ಮಾಡಿದೆ.

‘ನಮ್ಮ ಭದ್ರತಾ ಪಡೆಗಳು ಮತ್ತೊಮ್ಮೆ ಅತ್ಯುನ್ನತ ಶೌರ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿವೆ. ಅವರ ಜಾಗರೂಕತೆಗೆ ನಾವು ಆಭಾರಿಗಳಾಗಿದ್ದೇವೆ. ಜಮ್ಮು-ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಗುರಿಯಾಗಿಸಿಕೊಂಡಿದ್ದ ದುಷ್ಟ ಸಂಚನ್ನು ಅವರು ವಿಫಲಗೊಳಿಸಿದ್ದಾರೆ ’ಎಂದು ಮೋದಿ ಟ್ವೀಟಿಸಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಮತ್ತು ಹಿರಿಯ ಗುಪ್ತಚರ ಅಧಿಕಾರಿ ಗಳೂ ಸಭೆಯಲ್ಲಿ ಭಾಗವಹಿಸಿದ್ದರು. ನ.26ಕ್ಕೆ ಮುಂಬೈ ಭಯೋತ್ಪಾದಕ ದಾಳಿಗಳು ನಡೆದು 12 ವರ್ಷಗಳಾಗುತ್ತಿದ್ದು,ಆ ಸಂದರ್ಭದಲ್ಲಿ ದಾಳಿಗಳನ್ನು ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದರು ಎನ್ನುವುದನ್ನು ಈವರೆಗಿನ ತನಿಖೆಯು ಬೆಟ್ಟು ಮಾಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

 ಗುರುವಾರ ಬೆಳಗಿನ ಜಾವ ನಗ್ರೋತಾ ಸಮೀಪ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ಕೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ನಾಲ್ವರು ಶಂಕಿತ ಜೈಷ್ ಭಯೋತ್ಪಾದಕರು ಭದ್ರತಾ ಪಡೆಗಳೊಂದಿಗಿನ ಮೂರು ಗಂಟೆಗಳ ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟಿದ್ದರು. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು,ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಈ ತಿಂಗಳು ಗ್ರಾಮ ಪಂಚಾಯತ್ ಚುನಾವಣೆಗಳು ನಡೆಯಲಿರುವ ಕಾಶ್ಮೀರ ಕಣಿವೆಯತ್ತ ಈ ಭಯೋತ್ಪಾದಕರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News