ಪಡುಬಿದ್ರಿ ನಿಲ್ದಾಣದಲ್ಲಿ ಸಾಪ್ತಾಹಿಕ ರೈಲು ನಿಲುಗಡೆ ರದ್ದು: ಪ್ರಯಾಣಿಕರ ಅಸಮಾಧಾನ

Update: 2020-11-20 17:39 GMT

ಪಡುಬಿದ್ರಿ: ಬೆಳಪುವಿನಲ್ಲಿರುವ ಪಡುಬದ್ರಿ ರೈಲು ನಿಲ್ದಾಣದಲ್ಲಿ ತಿರುವನಂತಪುರ-ವೆರವಲ್ ಸಾಪ್ತಾಹಿಕ ಎಕ್ಸಪ್ರೆಸ್ ವಿಶೇಷ ರೈಲಿಗೆ  ನಿಲುಗಡೆಯನ್ನು ರದ್ದು ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಂಕಣ ರೈಲು ಮಾರ್ಗ ನಿರ್ಮಾಣವಾದರೂ ಕರಾವಳಿ ಜಿಲ್ಲೆಗಳಿಗೆ ಅಗತ್ಯವಿರುವ ರೈಲುಗಳ ನಿಲುಗಡೆಗೆ ಅವಕಾಶ ನೀಡದೆ ಕೊಂಕಣ ರೈಲ್ವೆ ನಿಗಮ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ರೈಲು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರು-ಪಡುಬಿದ್ರಿ- ಉಡುಪಿಯಲ್ಲಿ ನಿಲುಗಡೆಯಾಗುತಿದ್ದ ತಿರುವನಂತಪುರ-ವೆರವಲ್ ಸಾಪ್ತಾಹಿಕ ಎಕ್ಸಪ್ರೆಸ್ ವಿಶೇಷ ರೈಲಿಗೆ ಪ್ರಯಣಿಕರ ಕೊರತೆ ನೆಪವೊಡ್ಡಿ, ಏಕಾಏಕಿ ನಿಲುಗಡೆ ರದ್ದು ಮಾಡಿರುವುದು ತಿಳಿದುಬಂದಿದೆ. ಇದರಿಂದ ಈ ಭಾಗದಿಂದ ರೈಲಿನಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರು ಉಡುಪಿ ಅಥವಾ ಮಂಗಳೂರನ್ನು ಆಶ್ರಯಿಸಬೇಕಾಗಿದೆ. 

ಕೇರಳ, ಗೋವಾ ರಾಜ್ಯಗಳಿಗೆ ಹೆಚ್ಚುವರಿ ಬೋಗಿ ಸೇರಿಸಿ ಸಂಚರಿಸುವ ರೈಲುಗಳಿಗೆ ನಿಗಮ ಮಣೆ ಹಾಕುತ್ತಿದ್ದರೆ, ಕರಾವಳಿಗೆ ಅಗತ್ಯವೆನಿಸುವ ರೈಲು ನಿಲುಗಡೆಗೆ ನಿಲ್ದಾಣಗಳಲ್ಲಿ ಸ್ಥಳಾವಕಾಶದ ಕೊರತೆ ಎಂದು ಹೇಳಿ ಇಲ್ಲಿಯ ಯಾತ್ರಿಗಳಿಗೆ ಅನ್ಯಾಯವೆಸಗಲಾಗುತ್ತದೆ. ಈ ರೀತಿ ಜನೋಪಯೋಗಿಯಲ್ಲದ ಕೊಂಕಣ ರೈಲ್ವೆ ನಿಗಮವನ್ನು ರದ್ದು ಮಾಡಿ ನೈರುತ್ಯ ರೈಲ್ವೆಯಲ್ಲಿ ವಿಲೀನ ಮಾಡಬೇಕು ಎಂದು ಕುಂದಾಪುರ ರೈಲ್ವೆ ಹೋರಾಟ ಸಮಿತಿಯ ರಾಘವೇಂದ್ರ ಶೇಟ್ ಒತ್ತಾಯಿಸಿದ್ದಾರೆ.  

ಪಡುಬಿದ್ರಿ ನಿಲ್ದಾಣದಲ್ಲಿ ವಿಶೇಷ ರೈಲು ನಿಲುಗಡೆಯನ್ನು ರದ್ದು ಮಾಡಿರುವ ಬಗ್ಗೆ ಸಂಸದರು ಗಮನಹರಿಸಬೇಕು. ಈ ನಿಲ್ದಾಣದಲ್ಲಿ ಮತ್ಸ್ಯಗಂಧ ಹಾಗೂ ಬೆಂಗಳೂರು ರೈಲು ನಿಲುಗಡೆಯಾಗಬೇಕೆಂದು ಗ್ರಾಮ ಪಂಚಾಯಿತಿನಿಂದ ನಿರ್ಣಯ ಕೈಗೊಳ್ಳಲಾಗಿದೆ. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಕೇರಳ ಮಾದರಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಬೆಳಪು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ  ದೇವಿಪ್ರಸಾದ್ ಶೆಟ್ಟಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News