ಸಿಎಎ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಅಪ್ರಾಪ್ತನಿಗೆ 11 ತಿಂಗಳ ನಂತರ ಜಾಮೀನು

Update: 2020-11-21 12:13 GMT

ಲಕ್ನೋ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದ ನಗರದ ಠಾಕುರ್‍ಗಂಜ್ ಪ್ರದೇಶದ ನಿವಾಸಿ, 16 ವರ್ಷದ ಬಾಲಕ, 11 ತಿಂಗಳ ನಂತರ ಇತ್ತೀಚೆಗೆ ಬಿಡುಗಡೆಗೊಂಡಿದ್ದಾನೆ.

ಬಾಲಕನನ್ನು ಕಳೆದ ಡಿಸೆಂಬರ್ 25ರಂದು ಸ್ನೇಹಿತನೊಬ್ಬನ ಮನೆಯಿಂದ ಬಂಧಿಸಿ ಬಾಲಾಪರಾಧಿಗಳ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಡಿಸೆಂಬರ್ 19ರಂದು ಪೊಲೀಸರು ದಾಖಲಿಸಿದ್ದ ಎಫ್‍ಐಆರ್ ನಲ್ಲಿದ್ದ 25 ಮಂದಿಯ ಹೆಸರುಗಳ ಪೈಕಿ ಈ ಬಾಲಕನ ಹೆಸರು ಕೂಡ ಇತ್ತು. ಆದರೆ ತಾನು ಯಾವುದೇ ಪ್ರತಿಭಟನೆಯಲ್ಲೂ ಭಾಗಿಯಾಗಿಲ್ಲ ಎಂದು ಈಗ ಬಿಡುಗಡೆಯಾಗಿರುವ ಆತ ಹೇಳುತ್ತಾನೆ. ಹೆತ್ತವರಿಗೆ ಕರೆ ಮಾಡಲು ಕೂಡ ಅನುಮತಿಯನ್ನು ನನಗೆ ನೀಡಲಾಗಿರಲಿಲ್ಲ, ಬಂಧನದ ಮಾಹಿತಿಯನ್ನೂ ಕುಟುಂಬಕ್ಕೆ ನೀಡಿರಲಿಲ್ಲ ಎಂದು ಬಾಲಕ ಆರೋಪಿಸಿದ್ದಾನೆ ಎಂದು thewire.in ವರದಿ ಮಾಡಿದೆ.

ಆತನ ವಿರುದ್ಧ ಐಪಿಸಿಯ 14 ಸೆಕ್ಷನ್‍ಗಳನ್ವಯ ಪ್ರಕರಣ ದಾಖಲಿಸಲಾಗಿತ್ತು ಹಾಗೂ ಹಿಂಸೆಯಲ್ಲಿ ತೊಡಗಿದ, ಕ್ರಿಮಿನಲ್ ಸಂಚು ಹೂಡಿದ ಮತ್ತು ಸರಕಾರಿ ಅಧಿಕಾರಿಗೆ ತೊಂದರೆಯುಂಟು ಮಾಡಿದ ಆರೋಪ ಹೊರಿಸಲಾಗಿತ್ತಲ್ಲದೆ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆ 1932 ಅನ್ವಯ ಕೂಡ ಪ್ರಕರಣ ದಾಖಲಿಸಲಾಗಿತ್ತು. ಸೆಶನ್ಸ್ ನ್ಯಾಯಾಲಯವೊಂದು ಆತನಿಗೆ ನವೆಂಬರ್ 13ರಂದು ಜಾಮೀನು ನೀಡಿದೆ.

ಲಕ್ನೋ ಮೂಲದ ವಕೀಲೆ ಆಶ್ಮಾ ಇಝತ್ ಆತನ ಪರ ವಾದಿಸಿದ್ದರು. ಮೊದಲ ಜಾಮೀನು ಅರ್ಜಿ ಸೆಪ್ಟೆಂಬರ್ 15ರಂದು ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತಾದರೂ ಆತನನ್ನು ಬಿಡುಗಡೆಗೊಳಿಸಿದರೆ ಆತನಿಂದ ಸಮಾಜಕ್ಕೆ 'ಅಪಾಯ'ವಾಗಬಹುದೆಂದು ಅಪೀಲು ತಿರಸ್ಕೃತಗೊಂಡಿತ್ತು. ಮುಂದಿನ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 29 ರಂದು ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ದಾಖಲಿಸಿದ ನಂತರ ಆತನಿಗೆ ಜಾಮೀನು ದೊರಕಿತ್ತು.

ಸಿಎಎ ವಿರೋಧಿ ಹೋರಾಟದ ಸಂದರ್ಭ ಹಲವಾರು ಅಪ್ರಾಪ್ತರನ್ನು ಬಂಧಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಎನ್‍ಜಿಒವೊಂದು ದಾಖಲಿಸಿದ್ದ ಪಿಐಎಲ್ ಮೇಲೆ ನವೆಂಬರ್ 17ರಂದು ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್  ಈ ಕುರಿತಂತೆ ಉತ್ತರ ಪ್ರದೇಶ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆಯಲ್ಲದೆ ಎಲ್ಲಾ ಮಾಹಿತಿಯನ್ನು ನೀಡುವಂತೆ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 14ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News