ಮಹಿಳೆಯ ವಿದೇಶ ಯಾನಕ್ಕೆ ಅಡ್ಡಿಯಾದ ಕೋವಿಡ್ ವರದಿಯಲ್ಲಿನ ಗೊಂದಲ

Update: 2020-11-21 15:29 GMT
ಸಾಂದರ್ಭಿಕ ಚಿತ್ರ

ಮಂಗಳೂರು, ನ.20: ಗಲ್ಫ್ ರಾಷ್ಟ್ರಕ್ಕೆ ಶುಕ್ರವಾರ ತಡರಾತ್ರಿ ಪ್ರಯಾಣಿಸಬೇಕಿದ್ದ ಶಿವಮೊಗ್ಗ ನಿವಾಸಿ ಮಹಿಳೆಯೊಬ್ಬರು ಕೋವಿಡ್ ತಪಾಸಣಾ ವರದಿಯಲ್ಲಿನ ಅಧಿಕೃತತೆಯ ಅನುಮಾನದ ಕಾರಣಕ್ಕಾಗಿ ಯಾನ ಮೊಟಕುಗೊಂಡ ಘಟನೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಶಿವಮೊಗ್ಗದ 47ರ ಹರೆಯದ ಚಾಂದ್ ಬೇಗಂ ಎಂಬವರು ವಿದೇಶ ಪ್ರಯಾಣದ ಹಿನ್ನೆಲೆಯಲ್ಲಿ ಶಿವಮೊಗ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್‌ನಲ್ಲಿ ನ.18ರಂದು ಕೋವಿಡ್-19 ತಪಾಸಣೆ ಮಾಡಿಸಿಕೊಂಡಿದ್ದರು. ಅದರ ವರದಿಯೊಂದಿಗೆ ಅವರು ನ.20ರಂದು ರಾತ್ರಿ 11:30ಕ್ಕೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದರು. ಸ್ಪೈಸ್ ಜೆಟ್ ವಿಮಾನದ ಮೂಲಕ ಅವರು ದುಬೈಗೆ ಪ್ರಯಾಣಿಸಬೇಕಿತ್ತು. ಆದರೆ ಪ್ರಯಾಣಿಕರ ತಪಾಸಣೆಯ ಸಂದರ್ಭ ಶಿವಮೊಗ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ವತಿಯಿಂದ ನೀಡಲಾದ ಕೋವಿಡ್ ವರದಿಯಲ್ಲಿ ಶಿವಮೊಗ್ಗದ ಹೆಸರ ಪದಗಳು ಎರಡು ಕಡೆಗಳಲ್ಲಿ ವಿಭಿನ್ನವಾಗಿದೆ ಎಂದು ಹೇಳಿ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಪ್ರಯಾಣಿಕೆಯ ಸಂಬಂಧಿಕರು ದೂರಿದ್ದಾರೆ.

''ಶಿವಮೊಗ್ಗದ ಅಧಿಕೃತ ಸರಕಾರಿ ಆಸ್ಪತ್ರೆಯಲ್ಲೇ ವಿದೇಶ ಪ್ರಯಾಣಕ್ಕೆಂದು ಕೋವಿಡ್ ತಪಾಸಣೆಯನ್ನು ನನ್ನ ಸಹೋದರಿಗೆ ಮಾಡಲಾಗಿದೆ. ಅದರೆ ವರದಿಯ ಪ್ರತಿಯಲ್ಲಿ ಶಿಮೊಗ್ಗ ಹಾಗೂ ಶಿವಮೊಗ್ಗ (shimoga ಹಾಗೂ shivamogga) ಎಂದು ಆಂಗ್ಲ ಭಾಷೆಯಲ್ಲಿ ಬರೆದಿರುವುದನ್ನೇ ನೆಪವಾಗಿಸಿಕೊಂಡು ಆಕೆಗೆ ನಿನ್ನೆ ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ. ನಾನು ಆ ಸಂದರ್ಭ ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯ ಹಿರಿಯ ಪ್ರಯೋಗಾಲಯ ತಂತ್ರಜ್ಞರ ಜತೆ ಸ್ಪೈಸ್‌ಜೆಟ್‌ನ ಅಧಿಕಾರಿಯನ್ನು ಮಾತನಾಡಿಸಿ ಅವರು ಸ್ಪಷ್ಟನೆ ನೀಡಿದರೂ ಅವರು ಒಪ್ಪಲಿಲ್ಲ'' ಎಂದು ಚಾಂದ್ ಬೇಗಂರವರ ಸಹೋದರ ಝಾಕೀರ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ಚಾಂದ್ ಬೇಗಂರವರ ಕೋವಿಡ್ ತಪಾಸಣಾ ವರದಿಯನ್ನು ನಮ್ಮ ಪ್ರಯೋಗಾಲಯದಿಂದಲೇ ಸೀಲ್, ಸಹಿ ಸಹಿಯೊಂದಿಗೆ ನೀಡಲಾಗಿತ್ತು. ಐಸಿಎಂಆರ್‌ನಡಿಯೇ ತಪಾಸಣೆ ನಡೆದಿರುವುದು. ನನಗೂ ನಿನ್ನೆ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಮಹಿಳೆಯ ಸಹೋದರ ಕರೆ ಮಾಡಿ ವಿಷಯ ತಿಳಿಸಿದ್ದರು. ಶಿವಮೊಗ್ಗ ಹಾಗೂ ಶಿಮೊಗ್ಗ ಎಂಬುದಾಗಿ ಆಂಗ್ಲ ಭಾಷೆಯಲ್ಲಿ ಎರಡೂ ರೀತಿಯಲ್ಲಿ ಚಾಲ್ತಿಯಲ್ಲಿದ್ದು, ನಾವು ಇದೇರೀತಿ ವರದಿಯನ್ನು ನೀಡುತ್ತಿದ್ದೇವೆ. ಈ ಬಗ್ಗೆ ನಿನ್ನೆ ವಿಮಾನ ಸಂಸ್ಥೆಯ ಅಧಿಕಾರಿಗೂ ಮನವರಿಕೆ ಮಾಡಲಾಗಿತ್ತು. ಐಸಿಎಂಆರ್ ಮೂಲಕ ವರದಿ ಬರುವುದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರದ ಅಧಿಕೃತ ವೆಬ್‌ಸೈಟ್ ಮೂಲಕವೂ ವರದಿಯನ್ನು ದೃಢಪಡಿಸಲು ಅವಕಾಶವಿದೆ. ಆದರೆ ಈ ಕಾರಣಕ್ಕಾಗಿ ಸರಕಾರಿ ಸಂಸ್ಥೆಯೊಂದರ ವರದಿಯನ್ನು ತಿರಸ್ಕರಿಸುವುದು ಯಾಕೆಂದು ತಿಳಿಯುತ್ತಿಲ್ಲ''
-ಬಸವರಾಜು ಸಿ.ಎಸ್., ಹಿರಿಯ ಪ್ರಯೋಗಾಲಯ ತಂತ್ರಜ್ಞರು, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಶಿವಮೊಗ್ಗ.

ಮಹಿಳೆ ಪ್ರಯಾಣಿಕರಿಗೆ ವಿದೇಶ ಯಾನಕ್ಕೆ ಅವಕಾಶ ನೀಡದಿರುವುದು ಉದ್ದೇಶಪೂರ್ವಕವಲ್ಲ. ಪ್ರಯಾಣಿಕರು ತಂದಿರುವ ಕೋವಿಡ್ ತಪಾಸಣಾ ವರದಿಯಲ್ಲಿ ಆಸ್ಪತ್ರೆಯ ಅಧಿಕೃತ ಮೊಹರಿನ ಬದಲಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಯ ಮೊಹರು ಇತ್ತು. ಅದಲ್ಲದೆ ಅದರಲ್ಲಿರುವ ಎಸ್‌ಆರ್‌ಎಸ್ ಕೋಡ್ ಅನ್ನು ಐಸಿಎಂಆರ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಮಾಹಿತಿ ಕೂಡಾ ಲಭ್ಯವಾಗಲಿಲ್ಲ. ಹಾಗಾಗಿ ಆ ಮಹಿಳೆಗೆ ಅಧಿಕೃತ ಕೋವಿಡ್ ತಪಾಸಣಾ ವರದಿಯನ್ನು ತರಲು ಹೇಳಲಾಗಿದ್ದು, ಇಂದು ಮತ್ತೆ ಅವರ ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
-ಸಂತೋಷ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಸ್ಪೈಸ್‌ಜೆಟ್, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News