ದ.ಕ. ಜಿಲ್ಲೆಯಲ್ಲಿ 4 ರವಿವಾರ ಮಿಂಚಿನ ನೋಂದಣಿ: ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2020-11-21 11:35 GMT

ಮಂಗಳೂರು, ನ.21: ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದ್ದು, ನ.22 ಸೇರಿದಂತೆ ಮುಂದಿನ ನಾಲ್ಕು ರವಿವಾರಗಳಂದು (ನ.29, ಡಿ.6 ಮತ್ತು 13ರಂದು) ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಿಂಚಿನ ನೋಂದಣಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಎಲ್ಲ ಮತಗಟ್ಟೆಗಳಲ್ಲಿ ಈ ದಿನಗಳಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಎಲ್ಲ ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಬಹುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಈಗಾಗಲೇ ನ.18ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಡಿ.17ರವರೆಗೆ ಹಕ್ಕು ಮತ್ತು ಆಕ್ಷೇಪ ಸ್ವೀಕರಿಸಲಾಗುವುದು. ಜ.7ಕ್ಕೆ ಇವುಗಳ ವಿಲೇವಾರಿ ನಡೆಯಲಿದೆ. ಜ.18ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು 2021ರ ಜನವರಿ 1ಕ್ಕೆ 18 ವರ್ಷ ವಯಸ್ಸಾಗಿರಬೇಕು. ವಯಸ್ಸಿನ ಬಗ್ಗೆ ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾರ್ಸ್‌ಪೋರ್ಟ್, ಎಸೆಸೆಲ್ಸಿ/ಪಿಯುಸಿ ಅಂಕಪಟ್ಟಿ, ಪಾನ್ ಕಾರ್ಡ್‌ನ್ನು ದಾಖಲೆಯಾಗಿ ಒದಗಿಸಬೇಕು, ವಾಸಸ್ಥಳದ ಬಗ್ಗೆ ಪಡಿತರ ಚೀಟಿ, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಶೀದಿ, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಿಗೆ ಪ್ರತಿ, ಬಾಡಿಗೆ ಕರಾರು ಪತ್ರ ಮುಂತಾದವುಗಳನ್ನು ನೀಡಬಹುದು. ಜತೆಗೆ ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರ ನೀಡಬೇಕು ಎಂದರು.

18 ವರ್ಷ ಪೂರೈಸಿದ ಹೊಸ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ 6ರಲ್ಲಿ ಅರ್ಜಿ ನೀಡಬೇಕು. ಅನಿವಾಸಿ ಭಾರತೀಯರು ಹೆಸರು ಸೇರ್ಪಡೆಗೆ ನಮೂನೆ 6 ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಮೂನೆ -7, ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು (ಹೆಸರು, ತಂದೆಯ ಹೆಸರು, ವಿಳಾಸ, ವಯಸ್ಸು, ಲಿಂಗ) ತಿದ್ದುಪಡಿ ಮಾಡಲು ನಮೂನೆ -8, ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭ ನಮೂನೆ -8ಎಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

2020ರ ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 17,23,960 ಮತದಾರರಿದ್ದಾರೆ. ನ.18ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 17,32,641 ಮಂದಿ ಮತದಾರರಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಜಿಲ್ಲೆಯ ಮತದಾರರ ನೋಂದಣಾಧಿಕಾರಿಯನ್ನಾಗಿ ಸಹಾಯಕ ಆಯುಕ್ತರು, ಸಹಾಯಕ ಅಧಿಕಾರಿಯನ್ನಾಗಿ ತಹಶೀಲ್ದಾರ್ ಅವರನ್ನು ನೇಮಿಸಲಾಗಿದೆ ಎಂದರು.

ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟುಹೋಗಿದೆ, ವಿಳಾಸ, ವಾರ್ಡ್ ಬದಲಾಗಿದೆ, ವಯಸ್ಸು, ಜನ್ಮದಿನಾಂಕ ಬದಲಾಗಿದೆ ಎಂದು ಮತದಾರರು ಚುನಾವಣೆ ಸಂದರ್ಭ ದೂರುವ ಬದಲಿಗೆ ಈಗ ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲಿಸಿ ಲೋಪದೋಷಗಳಿದ್ದರೆ ಸರಿಪಡಿಸಬಹುದು. ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಬಳಿಯೂ ಪರಿಶೀಲನೆ ನಡೆಸಬಹುದು. www.ceokarnataka.kar.nic.in , www.nvsp.in, www.dk.nic.inನಲ್ಲಿ ವಿವರ ಪರಿಶೀಲಿಸಬಹುದು. ಮತದಾರರ ಸಹಾಯವಾಣಿ 1950ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News