ಪ್ರತೀ ಜಿಲ್ಲೆಯಲ್ಲಿ ತಲಾ ಎರಡು ಸಮಾವೇಶ: ನಳಿನ್ ಕುಮಾರ್ ಕಟೀಲು

Update: 2020-11-21 14:45 GMT

ಮಂಗಳೂರು, ನ.21: ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಎಲ್ಲ ಜಿಲ್ಲೆಗಳಲ್ಲಿ ತಲಾ ಎರಡು ಸಮಾವೇಶ ನಡೆಯಲಿದೆ. ಮೂರು ಅಥವಾ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಂದು ಸಮಾವೇಶ ಆಯೋಜಿಸಲಾಗಿದೆ. ಬಿಜೆಪಿ ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರ ಹಾಗೂ ಮಂಡಲ ಸಮಿತಿಯ ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಾದ್ಯಂತ ನ.27ರಿಂದ ಡಿ.3ರವರೆಗೆ ಪ್ರವಾಸ ಮಾಡಲು ಸಚಿವರು ಹಾಗೂ ಹಿರಿಯ ನಾಯಕರನ್ನು ಒಳಗೊಂಡ 6 ತಂಡಗಳನ್ನು ರಚಿಸಲಾಗಿದೆ ಎಂದರು.

ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಸಂಸದೆ ಶೋಭಾ ಕರಂದ್ಲಾಜೆ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂತಾದ ನಾಯಕರನ್ನು ಒಳಗೊಂಡ ನಮ್ಮ ತಂಡ ಉಡುಪಿ ಜಿಲ್ಲೆಯಿಂದ ಪ್ರವಾಸ ಆರಂಭಿಸಲಿದೆ. ದ.ಕ. ಮಂಗಳೂರು ಉತ್ತರ, ಮಂಗಳೂರು, ಮೂಡುಬಿದಿರೆ ಮತ್ತು ಬಂಟ್ವಾಳ ಕ್ಷೇತ್ರಗಳ ಸಮಾವೇಶ ಬಂಟ್ವಾಳದಲ್ಲಿ, ಸುಳ್ಯ, ಪುತ್ತೂರು, ಬೆಳ್ತಂಗಡಿ ಕ್ಷೇತ್ರಗಳ ಸಮಾವೇಶ ಉಪ್ಪಿನಂಗಡಿಯಲ್ಲಿ ನಡೆಯಲಿದ್ದು, ಶೀಘ್ರ ದಿನಾಂಕ ನಿಗದಿಯಾಗಲಿದೆ. ಕೋವಿಡ್ ಮುಂಜಾಗೃತಾ ಕ್ರಮವಾಗಿ ಪ್ರತಿ ಸಮಾವೇಶದಲ್ಲಿ ಸುಮಾರು 400 ಮಂದಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿ ನಿಟ್ಟಿನಲ್ಲಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಕುಟುಂಬ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶೇ.60ರಷ್ಟು ಪಂಚಾಯಿತಿಯಲ್ಲಿ ಪೂರ್ಣಗೊಂಡಿದೆ. ಪ್ರತಿ ಪಂಚಾಯಿತಿಯಲ್ಲಿ ಪಕ್ಷದ ಓರ್ವ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ 2) ಸಹಿತ ಪರಿಶಿಷ್ಟ ಜಾತಿ, ಪಂಗಡ, ಮಹಿಳೆ ಹಾಗೂ ಹಿಂದುಳಿದ ವರ್ಗದ ಪ್ರತಿನಿಧಿಗಳನ್ನು ಒಳಗೊಂಡ 5 ಮಂದಿಯ ಪಂಚರತ್ನ ಎನ್ನುವ ತಂಡ ರಚಿಸಿದ್ದೇವೆ. ಶೇ.70ರಷ್ಟು ಬೂತ್‌ಗಳಲ್ಲಿ ಈಗಾಗಲೇ ಪಂಚರತ್ನ ತಂಡ ರಚನೆಯಾಗಿದೆ. ಪೇಜ್ ಪ್ರಮುಖ್‌ರನ್ನು ಸಕ್ರಿಯಗೊಳಿಸಲಾಗಿದ್ದು, ಒಬ್ಬ ಪೇಜ್ ಪ್ರಮುಖ್‌ಗೆ 30 ಮತದಾರರ ಜವಾಬ್ದಾರಿ ನೀಡಲಾಗಿದೆ ಎಂದು ನಳಿನ್‌ಕುಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News