‘ಬ್ಯಾರಿ-ಕನ್ನಡ-ಇಂಗ್ಲಿಷ್-ಹಿಂದಿ-ರೋಮನ್-ಐಪಿ ಲಿಪಿ’ಯ ಶಬ್ಧಕೋಶ ಬಿಡುಗಡೆ

Update: 2020-11-21 13:02 GMT

ಮಂಗಳೂರು,ನ.21: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಪ್ರಕಟಿಸಿದ ‘ಬ್ಯಾರಿ-ಕನ್ನಡ-ಇಂಗ್ಲಿಷ್-ಹಿಂದಿ-ರೋಮನ್-ಐಪಿ ಲಿಪಿ’ಯನ್ನು ಒಳಗೊಂಡ ಶಬ್ಧಕೋಶದ ಬಿಡುಗಡೆ ಕಾರ್ಯಕ್ರಮವು ಮಂಗಳೂರು ತಾಪಂ ಹೊಸ ಕಟ್ಟಡದಲ್ಲಿ ಶನಿವಾರ ನಡೆಯಿತು.

ಶಬ್ಧಕೋಶ ಬಿಡುಗಡೆಗೊಳಿಸಿ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಕಳೆದ 11 ವರ್ಷದಲ್ಲಿ ಭಾಷಾ ಅಕಾಡಮಿಗಳ ಪೈಕಿ ಬ್ಯಾರಿ ಸಾಹಿತ್ಯ ಅಕಾಡಮಿಯು ಅನೇಕ ಮಹತ್ವದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಬ್ಯಾರಿಯೇತರರಿಗೆ ಬ್ಯಾರಿ ಭಾಷೆ ಕಲಿಯುವ ಸಲುವಾಗಿ ಹೊಸ ಮಾದರಿಯ ಶಬ್ಧಕೋಶ ಹೊರತಂದಿರುವುದು ಶ್ಲಾಘನೀಯ. ಇತ್ತೀಚೆಗಷ್ಟೇ ಅಕಾಡಮಿಯು ಹೊಸ ಬ್ಯಾರಿ ಲಿಪಿ ರಚಿಸಿರುವುದು ಕೂಡ ಉತ್ತಮ ಬೆಳವಣಿಗೆಯಾಗಿದೆ. ಭವಿಷ್ಯದಲ್ಲಿ ಇದರ ಪರಿಷ್ಕರಣೆಗೆ ಅವಕಾಶ ನೀಡುವ ಅಗತ್ಯವೂ ಇದೆ ಎಂದರು.

ಅಖಿಲ ಭಾರತ ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಬ್ಧಕೋಶ ಕೃತಿಯ ಮಾರ್ಗದರ್ಶಕರಾದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅಲ್ವಿನ್ ಡೇಸಾ ಅವರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ಬಿ. ಅಪ್ಪಾಜಿ ಗೌಡ ಭಾಗವಹಿಸಿದ್ದರು.

ಬ್ಯಾರಿ ಭಾಷಾ ದಿನಾಚರಣೆ: ಬ್ಯಾರಿ ಭಾಷಾ ದಿನಾಚರಣೆಯ ಬಗ್ಗೆ ಮಾತನಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಬ್ಯಾರಿ ಭಾಷೆಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳಾಗುತ್ತಿದ್ದರೂ ಕೂಡ ಯುನೆಸ್ಕೋ ಪಟ್ಟಿಯಲ್ಲಿ ಇನ್ನೂ ಬ್ಯಾರಿ ಭಾಷೆಯ ಸೇರ್ಪಡೆ ಆಗಿಲ್ಲ. ಈ ನಿಟ್ಟಿನಲ್ಲಿ ಸಮುದಾಯದ ನಾಯಕರು ಪ್ರಯತ್ನ ನಡೆಸಬೇಕಿದೆ ಎಂದರು.

ರಿಜಿಸ್ಟ್ರಾರ್ ಪೂರ್ಣಿಮಾ ಬ್ಯಾರಿ ಭಾಷೆಯಲ್ಲೇ ಸ್ವಾಗತಿಸಿ ಭಾಷಾ ದಿನಾಚರಣೆಯ ಹಿರಿಮೆ ಹೆಚ್ಚಿಸಿದರು. ಅಕಾಡಮಿಯ ಸದಸ್ಯರಾದ ಶಂಶೀರ್ ಬುಡೋಳಿ, ರಾಧಾಕೃಷ್ಣ ನಾವಡ ಉಪಸ್ಥಿತರಿದ್ದರು. ಸದಸ್ಯ ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News