ಜಿಲ್ ಬೈಡನ್ ನೀತಿ ನಿರ್ದೇಶಕಿಯಾಗಿ ನೇಮಕಗೊಂಡ ಮಾಲಾ ಅಡಿಗ ಕುಂದಾಪುರ ಕಕ್ಕುಂಜೆ ಅಡಿಗ ಕುಟುಂಬದ ಕುಡಿ

Update: 2020-11-21 16:01 GMT

ಉಡುಪಿ, ನ.21: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ , ತಮ್ಮ ಪತ್ನಿ, ರಾಷ್ಟ್ರದ ಪ್ರಥಮ ಮಹಿಳೆ ಎನಿಸಿಕೊಳ್ಳುವ ಜಿಲ್ ಬೈಡನ್ ಅವರ ನೀತಿ ನಿರ್ದೇಶಕರಾಗಿ ನೇಮಿಸಿರುವ ಭಾರತೀಯ ಮೂಲದ ಮಾಲಾ ಅಡಿಗ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ದ ಕಕ್ಕುಂಜೆ ಅಡಿಗ ಕುಟುಂಬದ ಕುಡಿ ಎಂಬುದು ಜಿಲ್ಲೆಯ ಹಿರಿಮೆಗೊಂದು ವಿಶೇಷ ಗರಿಯಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮತಾಳಿ ಇಂದು ದೇಶದ ಮುಂಚೂಣಿಯ ಬ್ಯಾಂಕ್‌ಗಳಲ್ಲಿ ಒಂದಾಗಿ ಗುರುತಿಸಲ್ಪಡುವ ಕರ್ಣಾಟಕ ಬ್ಯಾಂಕಿನ ಸ್ಥಾಪಕರಾದ ಕೆ.ಸೂರ್ಯನಾರಾಯಣ ಅಡಿಗ ಇದೇ ಕುಟುಂಬದ ಹಿರಿಯ ತಲೆ.

ಇಂದು ಅಂತಾರಾಷ್ಟ್ರೀಯ ಮಟ್ಟದ ಆಂಗ್ಲ ಲೇಖಕ, ಕಾದಂಬರಿಕಾರರಾಗಿ ಖ್ಯಾತರಾಗಿದ್ದು, ತಮ್ಮ ‘ದಿ ವೈಟ್ ಟೈಗರ್’ಗೆ ಕೃತಿಗೆ 2008ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದಿರುವ (ಈಗ ಆಸ್ಟ್ರೇಲಿಯದಲ್ಲಿ ನೆಲೆಸಿರುವ) ಅರವಿಂದ ಅಡಿಗ, ಸೂರ್ಯನಾರಾಯಣ ಅಡಿಗರ ಮೊಮ್ಮಗ. ಇದೀಗ ಇದೇ ಕುಟುಂಬದ ಮತ್ತೊಂದು ಕುಡಿ ದೂರದ ಅವೆುರಿಕದಲ್ಲಿ ಲೋಕಮಾನ್ಯತೆ ಪಡೆದಿದೆ.

ಮಾಲಾ ಅಡಿಗ (47) ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಅಮೆರಿಕದಲ್ಲೇ. ವಕೀಲ ವೃತ್ತಿಯ ಮಾಲಾ ಅಡಿಗ, ಜಿಲ್ ಬೈಡನ್‌ರ ಹಿರಿಯ ಸಲಹೆಗಾರರಾಗಿ ಹಾಗೂ ಬೈಡನ್- ಕಮಲಾ ಹ್ಯಾರಿಸ್ ಅವರ ಪ್ರಚಾರ ಅಭಿಯಾನದ ಹಿರಿಯ ನೀತಿ ಸಲಹೆಗಾರರಾಗಿ ಈಗಾಗಲೇ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಅವರು ಮುಂದಿನ ಜನವರಿ ತಿಂಗಳಲ್ಲಿ ರಾಷ್ಟ್ರದ ಪ್ರಥಮ ಮಹಿಳೆ ಎನಿಸಿಕೊಳ್ಳುವ ಜಿಲ್ ಬೈಡನ್‌ರ ನೀತಿ ನಿರ್ದೇಶಕಿಯಾಗಿ ನಿಯುಕ್ತಿಗೊಂಡಿದ್ದಾರೆ.

ಮಾಲಾ ಅಡಿಗರ ತಂದೆ ಕಕ್ಕುಂಜೆ ರಮೇಶ್ ಅಡಿಗ (84) ವೈದ್ಯರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಅವರು 24ರ ಹರೆಯದಲ್ಲೇ ಅಮೆರಿಕಕ್ಕೆ ತೆರಳಿದ್ದರು. ಕಳೆದ ಆರು ದಶಕಗಳಿಂದ ಅಮೆರಿಕದಲ್ಲಿ ವಾಸವಾಗಿರುವ ಇವರು ಅಮೆರಿಕನ್ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಇವರ ಪತ್ನಿಯೂ ವೈದ್ಯೆಯಾಗಿದ್ದು, ಕಳೆದ ವರ್ಷ ತೀರಿಕೊಂಡಿದ್ದಾರೆ.

                     ಮಾಲಾ ಅಡಿಗ ಅವರ ಕುಟುಂಬ 

ಮಾಲಾ ಅಡಿಗ, ರಮೇಶ್ ಅಡಿಗರ ಹಿರಿಯ ಮಗಳು. ಇವರಿಗೆ ಅವಳಿ- ಜವಳಿ ಸಹೋದರರಿದ್ದಾರೆ. ಇಂಜಿನಿಯರ್ ಹಾಗೂ ವಕೀಲ ವೃತ್ತಿಯಲ್ಲಿರುವ ಇವರು ಕ್ಯಾಲಿಫೋರ್ನಿಯ ಹಾಗೂ ಚಿಕಾಗೋಗಳಲ್ಲಿದ್ದಾರೆ. ಮಾಲಾ ಅಡಿಗರ ಪತಿ ಚಾರ್ಲ್ಸ್ ಬೀರೋ ಸಹ ವಕೀಲರಾಗಿದ್ದು, ಇವರಿಗೆ 15 ವರ್ಷ ಪ್ರಾಯದ ಆಶಾ ಎಂಬ ಮಗಳಿದ್ದಾಳೆ.

ಕುಂದಾಪುರದಲ್ಲಿ ಬಂಧುಗಳು: ಮಾಲಾ ಅಡಿಗರ ತಂದೆ ಡಾ. ರಮೇಶ್ ಅಡಿಗ ಮೂಲತ: ಕುಂದಾಪುರದ ಕಕ್ಕುಂಜೆಯವರು. ಇವರ ತಂದೆ ಚಂದ್ರಶೇಖರ ಅಡಿಗ ಹಾಗೂ ಸೂರ್ಯನಾರಾಯಣ ಅಡಿಗ (ಕೆ.ಎಸ್.ಎನ್. ಅಡಿಗ) ಅಣ್ಣ-ತಮ್ಮನ ಮಕ್ಕಳು. ಚಂದ್ರಶೇಖರ ಅಡಿಗ ಕುಂದಾಪುರದಲ್ಲಿ ನೆಲೆಸಿದ್ದು, ಈಗ ಅವರ ಹಿರಿಯ ಮಗಳು, ರಮೇಶ್ ಅಡಿಗರ ಅಕ್ಕ ನಿರ್ಮಲಾ ಉಪಾಧ್ಯಾಯ ಕುಂದಾಪುರದಲ್ಲಿದ್ದಾರೆ. ರಮೇಶ್ ಅಡಿಗರ ತಂಗಿ ಮನೋರಮಾ ಮಣಿಪಾಲದಲ್ಲಿ ನೆಲೆಸಿದ್ದಾರೆ. ಇವರ ಹಲವು ಬಂಧುಗಳು ಕಕ್ಕುಂಜೆ ಹಾಗೂ ಇತರ ಕಡೆಗಳಲ್ಲಿದ್ದಾರೆ.

ನವೆಂಬರ್‌ನಲ್ಲಿ ಬೆಂಗಳೂರಿಗೆ ಬಂದಿದ್ದ ಮಾಲಾ ಅಡಿಗ
ಮಾಲಾ ಅಡಿಗರ ಹೊಸ ನೇಮಕಾತಿಯಿಂದ ಸೋದರತ್ತೆ ನಿರ್ಮಲಾ ಉಪಾಧ್ಯಾಯ ಅತೀವ ಸಂತೋಷಗೊಂಡಿದ್ದಾರೆ. ಮಗಳು ಸುಜಾತ ಹಾಗೂ ಅಳಿಯ ಸೀತಾರಾಮ ನಕ್ಕಿತ್ತಾಯರೊಂದಿಗಿರುವ ನಿರ್ಮಲಾ, ಏಳು ವರ್ಷಗಳ ಹಿಂದೆ ತನ್ನ ತಮ್ಮನ ಕುಟುಂಬದೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡರು.
ಏಳು ವರ್ಷಗಳ ಹಿಂದೆ ರಮೇಶ ಅಡಿಗ ಅವರು ಮಾಲಾರ ಗಂಡ ಹಾಗೂ ಮಗಳು ಸೇರಿ ಇಡೀ ಕುಟುಂಬದೊಂದಿಗೆ ಕೊನೆಯ ಬಾರಿ ಊರಿಗೆ ಬಂದಿದ್ದು, ಕುಂದಾಪುರದಲ್ಲಿ ಉಳಿದುಕೊಂಡಿದ್ದರು. ಇವರು ಕಕ್ಕುಂಜೆಗೆ ತೆರಳಿ ಅಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ, ಕುಂದಾಪುರ ಆಸುಪಾಸಿನ ಬೀಚ್ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದರು. ಇದರೊಂದಿಗೆ ತಮ್ಮ ಬಂಧುಬಳಗವನ್ನೆಲ್ಲಾ ಭೇಟಿಯಾಗಿದ್ದರು ಎಂದು ಸುಜಾತ ಹೇಳಿದರು.

ಕಳೆದ ನವೆಂಬರ್ ತಿಂಗಳಲ್ಲಿ ರಮೇಶ್ ಅಡಿಗ ಇಡೀ ಕುಟುಂಬದೊಂದಿಗೆ ಬೆಂಗಳೂರಿಗೆ ಬಂದಿದ್ದರು. ಅನಿವಾರ್ಯ ಕಾರಣಗಳಿಂದ ಅವರಿಗೆ ಊರಿಗೆ ಬರಲಾಗಿರಲಿಲ್ಲ. ಹೀಗಾಗಿ ನಾವೆಲ್ಲರೂ ಬೆಂಗಳೂರಿಗೆ ತೆರಳಿದ್ದೆವು. ಇಡೀ ಕುಟುಂಬದ ಸಮ್ಮಿಲನ ಸದಾ ನೆನಪಿನಲ್ಲಿರುವಂತೆ ಚೆನ್ನಾಗಿ ನಡೆಯಿತು ಎಂದು ನಿರ್ಮಲಾ ಹಾಗೂ ಸೀತಾರಾಮ ನಕ್ಕಿತ್ತಾಯ ತಿಳಿಸಿದರು.

ಮಾಲಾ ತುಂಬಾ ಸೌಮ್ಯ ಸ್ವಭಾವದ ಒಳ್ಳೆಯ ಹುಡುಗಿ, ಎಲ್ಲರೊಂದಿಗೂ ಸರಳವಾಗಿ ಬೆರೆಯುತಿದ್ದರು. ಇಡೀ ಕುಟುಂಬಕ್ಕೆ ನಮ್ಮ ಸ್ಥಳೀಯ ಊಟ-ತಿಂಡಿ ತುಂಬಾ ಹಿಡಿಸಿತ್ತು. ಅಮೆರಿಕದಲ್ಲಿರುವಾಗಲೂ ಮಾಲಾ ಹಾಗೂ ರಮೇಶ ಆಗಾಗ ದೂರವಾಣಿ ಮೂಲಕ ಮಾತನಾಡುತ್ತಾರೆ. ಎಲ್ಲರ ಕಷ್ಟ-ಸುಖಗಳನ್ನು ವಿಚಾರಿಸುತ್ತಾರೆ ಎಂದು ನಿರ್ಮಲಾ, ತಮ್ಮ ಹಾಗೂ ಸೋದರ ಸೊಸೆಯನ್ನು ನೆನೆಸಿಕೊಂಡು ನುಡಿದರು.

ಮಾಲಾ ಈ ಹುದ್ದೆಗೇರಿರುವುದರಿಂದ ನಮಗೆ ತುಂಬಾ ಖುಷಿಯಾಗಿದೆ. ಅದರಲ್ಲಿ ಆಕೆ ಖಂಡಿತ ಯಶಸ್ಸು ಕಾಣುತ್ತಾರೆ ಎಂದು ನಿರ್ಮಲಾ ಸೊಸೆಗೆ ಶುಭ ಹಾರೈಸಿದರು.

ಇಲಿನಾಯ್ಸನಲ್ಲಿ ನೆಲೆಸಿದ್ದ ಮಾಲಾ, ಮಿನ್ನೆಸೋಟ ವಿವಿಗೆ ಸೇರಿದ ಗ್ರಿನ್ನೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಬಳಿಕ ಚಿಕಾಗೋ ಕಾನೂನು ಕಾಲೇಜಿನಿಂದ ಕಾನೂನು ಶಾಸ್ತ್ರದಲ್ಲಿ ಪದವಿ ಪಡೆದಿದ್ದು ವಕೀಲಿ ವೃತ್ತಿಯಲ್ಲಿದ್ದಾರೆ. 2008ರಲ್ಲಿ ಅವರು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರಚಾರ ಅಭಿಯಾನಕ್ಕೆ ಸೇರ್ಪಡೆಗೊಂಡಿದ್ದ ಆ ಬಳಿಕ ರಾಜಕೀಯ ಒಡನಾಟದಲ್ಲಿ ಹಿಂದಿರುಗಿ ನೋಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News