ಉಡುಪಿ: ವಿದ್ಯಾರ್ಥಿ ವೇತನ ವಿಳಂಬ, ಫೆಲೋಶಿಪ್ ಕಡಿತ ವಿರೋಧಿಸಿ ಸಿಎಫ್‌ಐ ಪ್ರತಿಭಟನೆ

Update: 2020-11-21 13:47 GMT

ಉಡುಪಿ, ನ.21: ವಿದ್ಯಾರ್ಥಿವೇತನ ಮಂಜೂರಾತಿಯಲ್ಲಿ ವಿಳಂಬ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪಿಎಚ್‌ಡಿ, ಎಂಫಿಲ್ ಫೆಲೋಶಿಪ್ ಕಡಿತಗೊಳಿಸಿರುವ ಸರಕಾರದ ಕ್ರಮವನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ಶನಿವಾರ ‘ಸ್ಕಾಲರ್ಶಿಪ್ ಕೊಡಿ’ ಪ್ರತಿಭಟನೆಯನ್ನು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ವಿದ್ಯಾರ್ಥಿ ವೇತನಕ್ಕೆ ಮೀಸಲಿರಿಸಿದ ಹಣವನ್ನು ಸರಕಾರ ಬೇರೆ ಕ್ಷೇತ್ರಗಳಿಗೆ ಬಳಕೆ ಮಾಡುತ್ತಿದೆ. ಕೊರೋನ ಲಾಕ್‌ಡೌನ್‌ನಿಂದ ಬಹುತೇಕ ಕ್ಷೇತ್ರಗಳು ನಷ್ಟದಲ್ಲಿರುವಾಗ ಸರಕಾರ ವಿದ್ಯಾರ್ಥಿವೇತನವನ್ನು ನೀಡದೆ ಪೋಷಕರ ಮೇಲೆ ಇನ್ನಷ್ಟು ಹೊರೆ ಹಾಕುತ್ತಿದೆ ಎಂದು ದೂರಿದರು.

ಕೊರೋನ ಕಾರಣ ನೀಡಿ ವಿದ್ಯಾರ್ಥಿ ವೇತನ ವಿಳಂಬ ಮಾಡಲಾಗುತ್ತಿದೆ ಮತ್ತು ಕಡಿತಗೊಳಿಸಲಾಗುತ್ತಿದೆ. ಆದರೆ ಶ್ರೀಮಂತರು ಪ್ರಧಾನಿ ನಿಧಿಗೆ ನೀಡಿದ ಕೋಟ್ಯಂತರ ಹಣ ಎಲ್ಲಿಗೆ ಹೋಯಿತು. ಅದನ್ನು ಬಳಕೆ ಮಾಡುವ ಬದಲು ವಿದ್ಯಾರ್ಥಿ ವೇತನಕ್ಕೆ ಕನ್ನ ಹಾಕಿರುವುದು ಸರಿಯಲ್ಲ. ಅದೇ ರೀತಿ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯಿಂದ ವಿದ್ಯಾಥಿಗರ್ಳು ಆತಂಕಿತರಾಗಿದ್ದಾರೆ ಎಂದರು.

ಈ ಕುರಿತ ಮನವಿಯನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಸಲ್ಲಿಸಲಾಯಿತು. ವಿದ್ಯಾರ್ಥಿ ವೇತನ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು. ಬಾಕಿ ಇರುವ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಬೇಕು. ಮಂಜೂ ರಾಗದೆ ಬಾಕಿ ಇರುವ ಎಲ್ಲ ಮಾದರಿಯ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆಗೊಳಿಸಬೇಕು. ಕಡಿತಗೊಳಿಸಿರುವ ಪಿಎಚ್‌ಡಿ ಫೆಲೋಶಿಪ್ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ನವಾಝ್ ಶೇಕ್, ಕುಂದಾಪುರ ಅಧ್ಯಕ್ಷ ಝಿಶಾನ್ ಕುಂದಾಪುರ, ರಾಜ್ಯ ಸಮಿತಿ ಸದಸ್ಯ ಸಿದ್ದೀಕ್ ಪುತ್ತೂರು, ಜಿಲ್ಲಾ ಉಪಾಧ್ಯಕ್ಷೆ ಝಂಝಂ, ಮುಖಂಡರಾದ ಸಾಧಿಕ್ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಮಣಿಪಾಲದ ಟಿ.ಉಪೇಂದ್ರ ಪೈ ಸ್ಮಾರಕ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News