ಕಸ್ತೂರಿರಂಗನ್ ವರದಿ ಬಗ್ಗೆ ಗೊಂದಲ ಬೇಡ : ಶಾಸಕ ಅಂಗಾರ

Update: 2020-11-21 13:54 GMT

ಸುಳ್ಯ ನ.21 :ಕಸ್ತೂರಿ ರಂಗನ್ ವರದಿ ವಿರೋಧಿಸಿ ಅಲ್ಲಲ್ಲಿ ಸಭೆಗಳು ನಡೆಯುತ್ತಿವೆ. ಜನರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಜನರಿಗೆ ತೊಂದರೆಯಾಗದಂತೆ ವರದಿ ಅನುಷ್ಠಾನಕ್ಕೆ ನಾವು ಒತ್ತಾಯಿಸುತ್ತೇವೆ. ತೊಂದರೆಯಾಗಲು ಯಾವುದೇ ಕಾರಣಕ್ಕೆ ಬಿಡುವುದಿಲ್ಲ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದ್ದಾರೆ.

ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕರು, ಹಿಂದೆ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ಕೇಂದ್ರಕ್ಕೆ ವರದಿ ನೀಡಲಾಗಿತ್ತು. ಆ ಸಂದರ್ಭ ಜನರಿಗೆ ತೊಂದರೆಯಾಗದಂತೆ ಕ್ರಮಕ್ಕೆ ನಾವು ಒತ್ತಾಯಿಸಿದ್ದೇವೆ. ಈಗಲೂ ಅದೇ ನಿಲುವಿನಲ್ಲಿ ನಾವಿದ್ದು ಈ ಭಾಗದ ಜನರಿಗೆ ತೊಂದರೆಯಾಗುವುದಿಲ್ಲ. ಜನರು ಗೊಂದಲಕ್ಕೆ ಒಳಗಾಗಬಾರದು.ನ.12 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಈ ವಿಷಯ ಚರ್ಚೆಗೆ ಬಂದು ಈ ಹಿಂದಿನ ವರದಿ ಮರು ಪರಿಶೀಲನೆಗೆ ಸಮಿತಿಯನ್ನು ಮಾಡಲಾಗಿದೆ. ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸೂಕ್ತ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮತ್ತು ಡಾ.ಕಸ್ತೂರಿ ರಂಗನ್ ವರದಿ ಹಾಗೂ ಇತರ ವಿಷಯಗಳ ಬಗ್ಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಮಿತಿಯನ್ನು ಮಾಡಲಾಗಿದ್ದು ಅದಕ್ಕೆ ಅರಣ್ಯ ಸಚಿವರಾದ ಆನಂದ ಸಿಂಗ್ ಅಧ್ಯಕ್ಷರಾಗಿರುತ್ತಾರೆ. ಉಳಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಗಣಿ ಸಚಿವ ಸಿ.ಸಿ. ಪಾಟೀಲ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‍ರವರು ಸದಸ್ಯರಾಗಿದ್ದಾರೆ. ಈ ಸಮಿತಿ ಸಭೆ ನಡೆಸುವ ಸಂದರ್ಭ ಈ ಭಾಗದ ಜನರ ಸಮಸ್ಯೆ ಮತ್ತು ಬೇಡಿಕೆಗಳನ್ನು ಮತ್ತೊಮ್ಮೆ ಮುಂದಿಡುತ್ತೇವೆ. ಜನರು ವಾಸಿಸುವ ಪ್ರದೇಶ ಈ ವರದಿಯೊಳಗೆ ಬರದಂತೆ ಮತ್ತು ಲೋಪದೋಷಗಳ ಚರ್ಚೆಗೆ ದ.ಕ. ಮತ್ತು ಉಡುಪಿಯ ಶಾಸಕರ ಸಭೆ ಕರೆದು ಚರ್ಚಿಸುವಂತೆಯೂ ಮನವಿ ಮಾಡಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News