ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಡಿ.19ರಂದು ಬೃಹತ್ ಲೋಕ್ ಅದಾಲತ್

Update: 2020-11-21 14:10 GMT

ಉಡುಪಿ, ನ.21: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳ ಸಹ ಯೋಗದಲ್ಲಿ ಡಿ.19ರಂದು ಬೃಹತ್ ಲೋಕ್ ಅದಾಲತ್(ಜನತಾ ನ್ಯಾಯಾಲಯ)ವನ್ನು ನಡೆಸಲಾಗುವುದೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.

ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬೃಹತ್ ಲೋಕ್‌ಅದಾಲತ್ ಮೂಲಕ ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ ಪ್ರಕರಣಗಳು, ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕ್ ಪ್ರಕರಣ ಗಳು, ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ/ಕೌಟುಂಬಿಕ ಪ್ರಕರಣಗಳು, ಸಿವಿಲ್ ಪ್ರಕರಣಗಳು ಹಾಗೂ ಇತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ಅತೀ ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಪ್ರತಿದಿನ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬೃಹತ್ ಲೋಕ್ ಅದಾಲತ್‌ಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್‌ಗಳನ್ನು ನಡೆಸಲಾಗು ತ್ತಿದೆ. ಜನಸಾಮಾನ್ಯರಿಗೆ ಅತೀ ತ್ವರಿತ ಹಾಗೂ ಯಾವುದೇ ವೆಚ್ಚವಿಲ್ಲದೇ ರಾಜೀ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸಿ ನ್ಯಾಯ ದೊರಕಿಸುವುದು ಈ ಜನತಾ ನ್ಯಾಯಾಲಯದ ಉದ್ದೇಶವಾಗಿದೆ. ಡಿ.19ರಂದು ಹಮ್ಮಿಕೊಂಡಿರುವ ಅದಾಲತ್‌ನಲ್ಲಿ ಎಲ್ಲಾ ರೀತಿಯ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ರಾಜಿಯಾಗಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಲಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರುಗಳಾದ ವಿವೇಕಾನಂದ ಪಂಡಿತ್, ಲಾವಣ್ಯ ಎಚ್.ಎನ್., ಭವಾನಿ ಎಲ್.ಜೆ., ಇರ್ಫಾನ್, ಮಂಜುನಾಥ ಎಂ.ಎಸ್., ಶೋಭಾ ಇ., ಮಹಾಂತೇಶ ಬುಸಗೋಳ್, ನಿರ್ಮಲಾ ಎಂ.ಸಿ., ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

3182 ಪ್ರಕರಣಗಳ ಇತ್ಯರ್ಥಕ್ಕೆ ಸಿದ್ಧತೆ
ಕಳೆದ ಅ.31ರವರೆಗೆ ಜಿಲ್ಲೆಯಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಸೇರಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ ಒಟ್ಟು 3182 ಪ್ರಕರಣ ಗಳನ್ನು ರಾಜಿ ಸಂಧಾನದ ಮೂಲಕ ಈ ಬೃಹತ್ ಲೋಕ್ ಅದಾಲತ್‌ನಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾರ್ಯಗತವಾಗಿದೆ ಎಂದು ಜೆ.ಎನ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಅದಾಲತ್‌ನಲ್ಲಿ ತ್ವರಿತವಾಗಿ ಪ್ರಕರಣ ಇತ್ಯರ್ಥವಾಗುವುದಲ್ಲದೆ, ಉಭಯ ಪಕ್ಷಗಾರರ ಒಪ್ಪಿಗೆಯಿಂದ ಇತ್ಯರ್ಥವಾದ ಮೊಕದ್ದಮೆಗಳ ವಿರುದ್ಧ ಅಪೀಲು ಹೋಗುವ ಸಾಧ್ಯತೆ ಇಲ್ಲದಿರುವುದರಿಂದ ಜನರಿಗೆ ಲೋಕ್‌ಅದಾಲತ್‌ಗಳ ಬಗ್ಗೆ ಇನ್ನಷ್ಟು ವಿಶ್ವಾಸ ಮೂಡುತ್ತಿರುವುದು ಸಂತಸ ತಂದಿದೆ. ಅದಾಲತ್ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು/ಹೋಬಳಿ ಮಟ್ಟದಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News