ಉಡುಪಿ: ಮತ್ತೆ 4 ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನ ಸೋಂಕು

Update: 2020-11-21 15:16 GMT

ಉಡುಪಿ, ನ.21: ಜಿಲ್ಲೆಯ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ಪ್ರಾರಂಭಿಸುವ ಮುನ್ನ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿರುವ ಕೋವಿಡ್ ಪರೀಕ್ಷೆಯಲ್ಲಿ ಇಂದು ಇನ್ನೂ ನಾಲ್ವರು ವಿದ್ಯಾರ್ಥಿಗಳು ಪಾಸಿಟಿವ್ ಬಂದಿದ್ದಾರೆ. ನಿನ್ನೆ 7 ಮಂದಿ ವಿದ್ಯಾರ್ಥಿಗಳು ಪಾಸಿಟಿವ್ ಬಂದಿದ್ದು, ಇದರಿಂದ ಸೋಂಕು ಪತ್ತೆಯಾಗಿರುವ ವಿದ್ಯಾರ್ಥಿಗಳ ಸಂಖ್ಯೆ 11ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳ ಪ್ರಾರಂಭಕ್ಕೆ ಸರಕಾರ ಹಸಿರು ನಿಶಾನೆ ತೋರಿದ್ದರೂ, ತರಗತಿಗೆ ಹಾಜರಾಗಲು ಇಚ್ಛಿಸುವ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೋನ ಪರೀಕ್ಷೆಗೊಳಗಾಗಿ ನೆಗೆಟಿವ್ ಫಲಿತಾಂಶ ಪಡೆದಿರಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲೆಯ 6000 ವಿದ್ಯಾರ್ಥಿಗಳು ಹಾಗೂ ಒಂದು ಸಾವಿರ ಪ್ರಾಧ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.

ಇದರಲ್ಲಿ ಬಹುತೇಕ ಎಲ್ಲರ ವರದಿಯ ಫಲಿತಾಂಶ ಬಂದಿದ್ದು, ಒಟ್ಟು 11 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಆರು ಮಂದಿ ಎಂಐಟಿಯ ವಿದ್ಯಾರ್ಥಿಗಳು, ಮೂವರು ಕಾರ್ಕಳದ ವಿದ್ಯಾರ್ಥಿಗಳು, ತಲಾ ಒಬ್ಬರು ಕುಂದಾಪುರ ಮತ್ತು ಮಾಹೆಯ ವಿದ್ಯಾರ್ಥಿಗಳು ಎಂದು ಡಾ.ಸೂಡ ತಿಳಿಸಿದರು.

ಇವರಲ್ಲಿ ಇಬ್ಬರು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿದರೆ ಉಳಿದವರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಉಳಿದಂತೆ ಯಾವುದೇ ಪ್ರಾಧ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿವೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ 19 ಪಾಸಿಟಿವ್: ಜಿಲ್ಲೆಯಲ್ಲಿ ಶನಿವಾರ 19 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಇಂದು ಪಾಸಿಟಿವ್ ಬಂದವರಲ್ಲಿ 10 ಮಂದಿ ಪುರುಷರು ಹಾಗೂ 9 ಮಂದಿ ಮಹಿಳೆಯರು. ಇವರಲ್ಲಿ ನಾಲ್ವರು ಪುರುಷರು ಹಾಗೂ ಐವರು ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳಿಲ್ಲ. ಉಡುಪಿ ತಾಲೂಕಿನ 5, ಕುಂದಾಪುರ ತಾಲೂಕಿನ 8, ಕಾರ್ಕಳ ತಾಲೂಕಿನ 6 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ ಎಂದರು.

35 ಮಂದಿ ಗುಣಮುಖ: ಶುಕ್ರವಾರ 35 ಮಂದಿ ಚಿಕಿತ್ಸೆ ಬಳಿಕ ಸೋಂಕಿ ನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ ಸದ್ಯ 22,108 ಆಗಿದೆ. ಜಿಲ್ಲೆಯಲ್ಲಿ ಸದ್ಯ 195 ಮಂದಿ ಸಕ್ರಿಯ ಕೋವಿಡ್ ಸೋಂಕಿತರಿದ್ದಾರೆ ಎಂದರು.

ಶುಕ್ರವಾರ 35 ಮಂದಿ ಚಿಕಿತ್ಸೆ ಬಳಿಕ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ ಸದ್ಯ 22,108 ಆಗಿದೆ. ಜಿಲ್ಲೆಯಲ್ಲಿ ಸದ್ಯ 195 ಮಂದಿ ಸಕ್ರಿಯ ಕೋವಿಡ್ ಸೋಂಕಿತರಿದ್ದಾರೆ ಎಂದರು.

2369 ನೆಗೆಟಿವ್: ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 2386 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 2369 ಮಂದಿ ನೆಗೆಟಿವ್ ಬಂದಿದ್ದಾರೆ. 17 (ಐಸಿಎಂಆರ್ ವರದಿ)ಮಂದಿ ಪಾಸಿಟಿವ್ ಬಂದಿದ್ದಾರೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 22,489 ಆಗಿದೆ.

ಶುಕ್ರವಾರದವರೆಗೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಗಾದವರ ಸಂಖ್ಯೆ ಈಗ 2,23,757 ಆಗಿದೆ. ಇವರಲ್ಲಿ 2,01,268 ಮಂದಿ ನೆಗೆಟಿವ್ ಬಂದಿದ್ದಾರೆ. ಈವರೆಗೆ ಒಟ್ಟು 22,489 ಮಂದಿ ಪಾಸಿಟಿವ್ ಬಂದಿದ್ದರೆ, ಇವರಲ್ಲಿ 22,108 ಮಂದಿ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News