‘ಅವರ್ ಲೇಡಿ ಮಿರಾಕಲ್ಸ್ ಹೋಮ್’ ಲೋಕಾರ್ಪಣೆ

Update: 2020-11-21 16:47 GMT

ಮಂಗಳೂರು, ನ.21: ಸಂತ ಆಂತೋನಿ ಅವರು ಪವಾಡಗಳ ಸಂತ ಎಂದೇ ಕರೆಸಿಕೊಂಡವರು. ಅವರು ಯೇಸುವಿನ ಮೇಲೆ ಇಟ್ಟ ವಿಶ್ವಾಸದಿಂದ ತಮ್ಮ ಬದುಕಿನಲ್ಲಿ 13 ಪವಾಡಗಳನ್ನು ಮಾಡಿದ್ದಾರೆ. ದೇವರ ಮೇಲೆ ವಿಶ್ವಾಸ ಇಟ್ಟವರಿಗೆ ಅನ್ಯಾಯ ಆಗುವುದಿಲ್ಲ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ತಿಳಿಸಿದ್ದಾರೆ.

ನಗರದ ಜೆಪ್ಪುವಿನಲ್ಲಿರುವ ಸಂತ ಆಂತೋನಿ ಆಶ್ರಮ ವತಿಯಿಂದ 100 ಜನ ಮಾನಸಿಕ ಅಸ್ವಸ್ಥ ರೋಗಿಗಳಿಗಾಗಿ ನಿರ್ಮಿಸಲ್ಪ ನೂತನ ಕಟ್ಟಡ ‘ಅವರ್ ಲೇಡಿ ಮಿರಾಕಲ್ಸ್ ಹೋಮ್’ ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಆಂತೋನಿ ಅವರು ದೀನದಲಿತ, ಬಡವರು, ಶೋಷಿತರಿಗೆ, ಅನ್ಯಾಯವಾದವರ ಪರವಾಗಿ ದುಡಿಯಬೇಕು. ಅವರು ಹಸಿದಾಗ ರೊಟ್ಟಿ ನೀಡುವ ಕೆಲಸವಾಗಬೇಕು ಎಂದು ತಮ್ಮ ಬದುಕಿನಲ್ಲಿ ತೋರಿಸಿಕೊಟ್ಟರು ಎಂದರು.

ಸಂತ ಆಂತೋನಿ ಆಶ್ರಮದ ಕುರಿತು ಎಲ್ಲರಿಗೂ ಗೊತ್ತು. ಗ್ರಾಮೀಣ ಭಾಗದ ಕ್ರೈಸ್ತರಲ್ಲಿ ಒಂದು ಭಾವನೆ ಇದೆ; ನಮಗೆ ಎಲ್ಲಿಯೂ ಜಾಗ ಇಲ್ಲದೇ ಹೋದರೆ ಕಡೆಗೆ ಸಂತ ಆಂತೋನಿ ಆಶ್ರಮವಿದೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಆಶ್ರಮ ಸಂತ ಆಂತೋನಿ ಅವರ ಮತ್ತೊಂದು ಪವಾಡ ಎಂದೇ ಹೇಳಬಹುದು ಎಂದರು.

ಈ ಸಂದರ್ಭ ಬಿಷಪ್ ಅವರು 2021ನೇ ವರ್ಷದ ಸಂತ ಆಂತೋನಿ ಅವರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕಟ್ಟಡ ನಿರ್ಮಾಣ ಮಾಡಿದ ವೆಲಂಕಣಿ ಕನ್‌ಸ್ಟ್ರಕ್ಷನ್ ಮಾಲಕ ರಿಚ್ಚರ್ಡ್ ರೋಡ್ರಿಗಸ್, ಕಟ್ಟಡ ವಿನ್ಯಾಸಗಾರ ಲಾರೆನ್ಸ್ ಕುಟಿನ್ಹಾ ಮತ್ತು ಪ್ರಮುಖ ಕೆಲಸಗಾರರನ್ನು ಬಿಷಪರು ಗೌರವಿಸಿದರು.

ಈ ಸಂದರ್ಭ ಶಾಸಕ ಡಿ. ವೇದವ್ಯಾಸ ಕಾಮತ್, ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೋಯ್ಲಸ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಎಂಎಲ್‌ಸಿ ಐವನ್ ಡಿಸೋಜ, ಕಾರ್ಪೊರೇಟರ್‌ಗಳಾದ ಜೆಸಿಂತಾ ಆಲ್ಪ್ರೆಡ್, ಭರತ್ ಎಸ್., ವೀಣಾ ಪ್ರವೀಣ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಸೋಮ ಶೇಖರ್, ಫಾದರ್ ಮುಲ್ಲರ್ಸ್‌ ಆಸ್ಪತ್ರೆಯ ಆಡಳಿತ ನಿರ್ದೇಶಕ ಫಾ.ರಿಚರ್ಡ್ ಕುವೆಲ್ಲೋ, ಸಂಸ್ಥೆಯ ಆಡಳಿತಾಧಿಕಾರಿ ಫಾ. ಆಲ್ಬನ್ ರೊಡ್ರಿಗಸ್, ಸಹಾಯಕ ನಿರ್ದೇಶಕ ಫಾ.ರೋಶನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಸಂತ ಆಂತೋನಿ ಆಶ್ರಮದ ನಿರ್ದೇಶಕ ಫಾ.ಒನಿಲ್ ಡಿಸೋಜ ಸ್ವಾಗತಿಸಿದರು. ಸಂತೋಷ್ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.

ಸಂತ ಆಂತೋನಿ ಆಶ್ರಮದ ಉಚಿತ ಸೇವೆ: ಸಂತ ಆಂತೋನಿ ಆಶ್ರಮ ಸ್ಥಾಪನೆಯಾದದ್ದು ಮಿಲಾಗ್ರಿಸ್ ದೇವಾಲಯದಲ್ಲಿ. ಈ ಕಾರಣದಿಂದ ಈಗ ಕೆಲಸ ಪೂರ್ಣಗೊಂಡಿರುವ ಈ ಕಟ್ಟಡಕ್ಕೆ ‘ಅವರ್ ಲೇಡಿ ಆ್ ಮಿರಾಕಲ್ಸ್’ ಎಂದು ಹೆಸರಿಡಲಾಗಿದೆ. ಈ ಕಟ್ಟಡದಲ್ಲಿ 50 ಪುರುಷರಿಗೆ ಮತ್ತು 50 ಮಹಿಳೆಯರಿಗೆ ಒಟ್ಟು 100 ನಿವಾಸಿಗಳಿಗೆ ವಾಸಿಸುವಷ್ಟು ಸ್ಥಳವಕಾಶವಿದೆ. ಚಿಕಿತ್ಸೆ ಎಲ್ಲವೂ ಉಚಿತವಾಗಿ ನೀಡಲಾಗುತ್ತದೆ. ಆಶ್ರಮದ ಎಲ್ಲ ಮನೆಗಳಿಗೆ ಬೇಕಾಗುವಷ್ಟು ಸೌರಶಕ್ತಿಯನ್ನು ಈ ಕಟ್ಟಡದ ಮೇಲೆ ಹಾಕಿರುವ ಸೋಲಾರ್ ಪ್ಯಾನೇಲ್‌ಗಳು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News