ಆಯುರ್ವೇದ ವೈದ್ಯರೂ ಇನ್ನು ಶಸ್ತ್ರಚಿಕಿತ್ಸೆ ನಡೆಸಬಹುದು!

Update: 2020-11-22 03:50 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ.22: ಆಯುರ್ವೇದ ವೈದ್ಯರಿಗೆ ಸೂಕ್ತ ತರಬೇತಿ ನೀಡಿ ಅವರು ಸಾಮಾನ್ಯ ಶಸ್ತ್ರಚಿಕಿತ್ಸೆ ನೆರವೇರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಕೇಂದ್ರದ ಹೊಸ ಅಧಿಸೂಚನೆಯಂತೆ ಇಎನ್‌ಟಿ, ನೇತ್ರಶಾಸ್ತ್ರ, ಆರ್ಥೊ ಮತ್ತು ದಂತಸಂಬಂಧಿ ಸಮಸ್ಯೆಗಳಿಗೂ ಚಿಕಿತ್ಸೆ ನೀಡಬಹುದಾಗಿದೆ. ಸರಕಾರದ ಈ ನಿರ್ಧಾರ ವೈದ್ಯಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ಆದಾಗ್ಯೂ ಇಂಥ ಶಸ್ತ್ರಚಿಕಿತ್ಸೆಗಳು ಆಯುರ್ವೇದ ಸಂಸ್ಥೆಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಕಳೆದ 25 ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಈ ಅಧಿಸೂಚನೆ ಇದನ್ನು ಕೇವಲ ಅಧಿಕೃತಗೊಳಿಸಿದೆ ಎಂದು ಕೇಂದ್ರ ಭಾರತೀಯ ವೈದ್ಯಕೀಯ ಮಂಡಳಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 19ರಂದು ಹೊರಡಿಸಿದ ಅಧಿಸೂಚನೆ ಅನ್ವಯ ಆಯುರ್ವೇದ ವೈದ್ಯರಿಗೆ ಸ್ನಾತಕೋತ್ತರ ತರಬೇತಿಯನ್ನು ನೀಡಬಹುದಾಗಿದ್ದು, ಈ ನಿಟ್ಟಿನಲ್ಲಿ ಭಾರತೀಯ ಕೇಂದ್ರ ವೈದ್ಯಕೀಯ ಮಂಡಳಿ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಬಂಧನೆ-2018ಕ್ಕೆ ತಿದ್ದುಪಡಿ ತರಲಾಗಿದೆ. ಕೇಂದ್ರ ಸರಕಾರದ ಅನುಮೋದನೆಯೊಂದಿಗೆ ಈ ತಿದ್ದುಪಡಿ ತರಲಾಗಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಅಧ್ಯಯನದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಶಾಲ್ಯ ತಂತ್ರ (ಸಾಮಾನ್ಯ ಶಸ್ತ್ರಚಿಕಿತ್ಸೆ) ಮತ್ತು ಶಾಲಾಕ್ಯ ತಂತ್ರ (ಕಿವಿ, ಮೂಗು, ಗಂಟಲು, ತಲೆ ಮತ್ತು ಕಣ್ಣು) ಶಸ್ತ್ರಚಿಕಿತ್ಸೆಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ತರಬೇತಿ ನೀಡಲಾಗುತ್ತದೆ. ಗ್ಯಾಂಗ್ರಿನ್ ಕತ್ತರಿಸುವುದು, ಅತ್ಯಾಧುನಿಕ ಗ್ಯಾಸ್ಟ್ರೊ ಇಂಟೆಸ್ಟಿನಲ್ ಶಸ್ತ್ರಚಿಕಿತ್ಸೆ, ಸ್ಕಿನ್ ಗ್ರಾಫ್ಟಿಂಗ್, ಲ್ಯಾಪ್ರೊಟಮಿಯಂಥ ಶಸ್ತ್ರಚಿಕಿತ್ಸೆಗಳನ್ನೂ ನಿರ್ವಹಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News