ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ‘ಶ್ರೀ ನಾರಾಯಣ ಗುರುದೇವ ರೈಲ್ವೆ ಸ್ಟೇಷನ್’ ಎಂದು ನಾಮಕರಣಕ್ಕೆ ಆಗ್ರಹ

Update: 2020-11-22 09:00 GMT

ಮಂಗಳೂರು, ನ.22: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ 'ಶ್ರೀ ನಾರಾಯಣ ಗುರುದೇವ ರೈಲ್ವೆ ಸ್ಟೇಷನ್' ಎಂದು ನಾಮಕರಣ ಮಾಡ ಬೇಕೆಂದು ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್ ನೇತೃತ್ವದಲ್ಲಿ ಮೇಯರ್ ದಿವಾಕರ್‌ಗೆ ಮನವಿ ಸಲ್ಲಿಸಲಾಯಿತು.

ಮಂಗಳೂರಿಗೆ ರೈಲ್ವೆಯಲ್ಲಿ ಆಗಮಿಸಿ ಶ್ರೀ ನಾರಾಯಣ ಗುರುದೇವರು 1908ರಲ್ಲಿ ತುಳುನಾಡಿನ ಮಣ್ಣಿಗೆ ಪಾದಾರ್ಪಣೆ ಮಾಡಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ನೆನಪಿಗೆ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್‌ಗೆ ಶ್ರೀ ನಾರಾಯಣ ಗುರುದೇವ ರೈಲ್ವೆ ಸ್ಟೇಷನ್ ಎಂದು ನಾಮಕರಣ ಮಾಡಲು ಅಬ್ದುಲ್ ರವೂಫ್ ಗೊತ್ತುವಳಿ ಮಂಡಿಸಿ ಮನವಿಯಲ್ಲಿ ಒತ್ತಾಯಿಸಲಾಯಿತು.

ಶ್ರೀ ನಾರಾಯಣ ಗುರುಗಳು ಶೋಷಿತ ಅವಕಾಶ ವಂಚಿತ ವರ್ಗಗಳಿಗೆ ಕೇರಳ ರಾಜ್ಯದಲ್ಲಿ ನಾನಾ ರೂಪಗಳಿಂದ ಶಕ್ತಿ ತುಂಬುತ್ತಿದ್ದ ಕಾಲದಲ್ಲಿ ಮಂಗಳೂರಿನ ಕೆಲವು ಬಿಲ್ಲವ ಪ್ರಮುಖರು ಕೇರಳಕ್ಕೆ ಹೋಗಿ ಅವರನ್ನು ಕಂಡು ಮಂಗಳೂರಿಗೆ ಕರೆತರುವಲ್ಲಿ ಸಫಲರಾದರು. ಶ್ರೀ ನಾರಾಯಣ ಗುರು 1908ರಲ್ಲಿ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಮಂಗಳೂರಿಗೆ ಪಾದಸ್ಪರ್ಶ ಮಾಡಿದರು. ಆದ್ದರಿಂದ 1908 ವರ್ಷ ನಮ್ಮ ರಾಜ್ಯದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯುವಂತಹ ವರ್ಷ.

ಬಿಲ್ಲವ ಪ್ರಮುಖರು ತಮಗೊಂದು ದೇವಸ್ಥಾನವನ್ನು ಪ್ರತಿಷ್ಠಾಪಿಸಿ ಕೊಡಬೇಕೆಂದು ಗುರುಗಳಲ್ಲಿ ಭಿನ್ನವಿಸಿಕೊಂಡರು. ಗುರುಗಳು ಕುದ್ರೋಳಿಯಲ್ಲಿ ಶಿವಪ್ರಿಯವಾದ ತುಂಬೆ ಗಿಡ ಮತ್ತು ವಿಷ್ಣು ಪ್ರಿಯವಾದ ತುಳಸಿ ಗಿಡಗಳು ಒಂದೆಡೆ ಬೆಳೆದಿರುವುದನ್ನು ನೋಡಿ ಈ ಸ್ಥಳವೇ ದೇವಸ್ಥಾನ ಕ್ಕೆ ಯೋಗ್ಯವೆಂದು ಸೂಚಿಸಿದರು. ನಾಲ್ಕು ವರ್ಷಗಳಲ್ಲಿ ದೇವಸ್ಥಾನ ನಿರ್ಮಾಣವಾಯಿತು ಕಾಶಿಯಿಂದ ಶಿವಲಿಂಗ ತಂದು 21-2-1912ರ ಬುಧವಾರ ಗುರುಗಳು ಗೋಕರ್ಣನಾಥ ಎನ್ನುವ ಹೆಸರಿನಿಂದ ಪ್ರತಿಷ್ಠಾಪನೆ ಮಾಡಿದರು. ಹಾಗೂ ತನ್ನ ಅನುಯಾಯಿಗಳಿಗೆ ವಿದ್ಯಾಭ್ಯಾಸ ಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ ಕೈಮಗ್ಗ, ಗುಡಿ ಕೈಗಾರಿಕೆ, ಕೃಷಿ ಮತ್ತು ವ್ಯಾಪಾರ ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕೆಂದು ತಿಳಿಸಿದರು. ಇಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವಿಶ್ವ ಪ್ರಸಿದ್ಧವಾಗಿದೆ. ಆದುದರಿಂದ ಶ್ರೀ ನಾರಾಯಣ ಗುರುಗಳ ಹೆಸರನ್ನು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಇಟ್ಟು ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳು ಪ್ರಚಾರವಾಗುವಂತೆ ಮಾಡಲು ಆಗ್ರಹಿಸಲಾಯಿತು.
ಮುಂದಿನ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಗೊತ್ತುವಳಿ ಮಂಡಿಸಿ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭ ಕಾರ್ಪೊರೇಟರ್‌ಗಳಾದ ಎಂ.ಶಶಿಧರ ಹೆಗ್ಡೆ, ಲ್ಯಾನ್ಸಿ ಲೋಟ್ ಪಿಂಟೊ, ಎ.ಸಿ.ವಿನಯರಾಜ್, ಅನಿಲ್ ಕುಮಾರ್ ಕೇಶವ ಮರೋಳಿ, ಶಂಸುದ್ದೀನ್ ಕುದ್ರೋಳಿ, ಭಾಸ್ಕರ್ ಕೆ., ಲತೀಫ್ ಕಂದಕ್, ನವೀನ್ ಡಿಸೋಜ, ಝೀನತ್ ಶಂಸುದ್ದೀನ್, ಪ್ರವೀಣ್ ಚಂದ್ರ ಆಳ್ವ, ಅಶ್ರಫ್ ಬಜಾಲ್, ಜೆಸಿಂತಾ ಆಲ್ಫ್ರೆಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News