ದೇವಾಲಯದ ಆವರಣದಲ್ಲಿ ಚುಂಬನದ ದೃಶ್ಯ: #BoycottNetflix ಹ್ಯಾಶ್ ಟ್ಯಾಗ್ ಟ್ರೆಂಡಿಂಗ್

Update: 2020-11-22 11:08 GMT

ಹೊಸದಿಲ್ಲಿ: ‘ಲವ್ ಜಿಹಾದ್’ ಎಂದು ಕೇಸರಿ ಟ್ರೋಲ್ ಗಳು ಟ್ವಿಟರ್ ನಲ್ಲಿ ತನಿಷ್ಕ್ ಜಾಹೀರಾತನ್ನು ಬಹಿಷ್ಕರಿಸಿದ ಕೆಲ ದಿನಗಳ ಬಳಿಕ, ಇದೀಗ ನೆಟ್ ಫ್ಲಿಕ್ಸ್ ಬಹಿಷ್ಕರಿಸಬೇಕೆಂದು ಟ್ವೀಟ್ ಮಾಡುತ್ತಿದ್ದಾರೆ.

‘ಎ ಸುಟೇಬಲ್ ಬಾಯ್’ ಚಿತ್ರದ ನಿರ್ಮಾಪಕರು ದೇವಸ್ಥಾನದ ಆವರಣದಲ್ಲಿ ಚಿತ್ರೀಕರಿಸಿರುವ ಚುಂಬನದ ದೃಶ್ಯವು ವಿವಾದಕ್ಕೆ ಕಾರಣವಾಗಿದ್ದು #BoycottNetflix ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ನಿರ್ಮಾಪಕಿ ಮೀರಾ ನಾಯರ್ ಅವರ ವೆಬ್ ಸಿರೀಸ್ ‘ಎ ಸುಟೇಬಲ್ ಬಾಯ್’ ಲವ್ ಜಿಹಾದ್ ನ ಪ್ರಚಾರ ಮಾಡುತ್ತಿದೆ ಎಂದು ಕೇಸರಿ ಟ್ರೋಲ್ ಗಳು ಆರೋಪಿಸಿವೆ. ಇದೀಗ ಬಿಜೆಪಿ ನಾಯಕ ಗೌರವ್ ತಿವಾರಿ ಮಧ್ಯಪ್ರದೇಶದ ರೆವಾದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿ ನೆಟ್ ಫ್ಲಿಕ್ಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವೀಡಿಯೊ ಹಾಗೂ ಎಫ್ಐಆರ್ ನ ವಿವರಗಳನ್ನು ಪೋಸ್ಟ್ ಮಾಡಿರುವ ತಿವಾರಿ, ನೆಟ್ ಫ್ಲಿಕ್ಸ್ ಅನ್ನು ತನ್ನ ಮೊಬೈಲ್ ನಿಂದ ಅನ್ ಇನ್ ಸ್ಟಾಲ್ ಮಾಡಿರುವುದಾಗಿ ತಿಳಿಸಿದ್ದಾರೆ. ಟ್ವಿಟರ್ ನಲ್ಲೀಗ #BoycottNetflix ಟ್ರೆಂಡ್ ಆಗಿದೆ.

ವಿವಾದದಲ್ಲಿ ಸಿಲುಕಿರುವ ದೃಶ್ಯದಲ್ಲಿ ಲತಾ ಪಾತ್ರಧಾರಿ ಯುವತಿ ದೇವಾಲಯದ ಆವರಣದಲ್ಲಿ ಮತ್ತೊಂದು ಧರ್ಮದ ಪ್ರೇಮಿಯನ್ನು ಚುಂಬಿಸುತ್ತಿರುವುದನ್ನು ಕಾಣಬಹುದು. ನಿರ್ಮಾಪಕರು ಸೃಜನಶೀಲ ಸ್ವಾತಂತ್ರವನ್ನು ಏಕೆ ಪ್ರತಿಪಾದಿಸಲಿಲ್ಲ. ಅದೇ ದೃಶ್ಯವನ್ನು ಮಸೀದಿಯಲ್ಲಿ ಏಕೆ ಚಿತ್ರೀಕರಿಸಿಲ್ಲ. ನಿರ್ಮಾಪಕರು ‘ಲವ್ ಜಿಹಾದ್’ ಅನ್ನು ಉತ್ತೇಜಿಸುತ್ತಿದ್ದಾರೆ ಎಂದು ತಿವಾರಿ ಆರೋಪಿಸಿದ್ದಾರೆ.

ತಿವಾರಿ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ಮಾಹಿತಿಯಂತೆ ಮಧ್ಯಪ್ರದೇಶದ ಶಿವ ದೇವಾಲಯದಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

ಆರು ಭಾಗಗಳ ಸಿರೀಸ್ ಅನ್ನು ಮೀರಾ ನಾಯರ್ ನಿರ್ದೇಶನ ಮಾಡುತ್ತಿದ್ದು, ರಾಮ್ ಕಪೂರ್, ಸಹಾನಾ ಗೋಸ್ವಾಮಿ, ಹೊಸ ಮುಖ ತಾನ್ಯಾ, ರಸಿಕಾ ದುಗಾಲ್ ನಮಿತಾ ದಾಸ್, ಗಗನ್ ದೇವ್ ಮತ್ತಿತರರು ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News