ಮನುಷ್ಯನ ಮೇಲೆ ಪರಿಣಾಮ ಬೀರುವ ಸಾಹಿತ್ಯವೇ ಭಜನೆ: ಅಮ್ಮಣ್ಣಾಯ

Update: 2020-11-22 12:05 GMT

ಕಾಪು, ನ.22: ದಾಸ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದು ಸರಳ ಹಾಗೂ ಸುಲಭ. ಶತಶತಮಾನಗಳಿಂದ ದೇವರ ಮೇಲಿರುವ ಅಚಲ ನಂಬಿಕೆ ಮತ್ತು ಭಾವನೆಗಳಿಂದ ಭಜನಾ ಸಾಹಿತ್ಯ ಹುಟ್ಟಿಕೊಂಡಿತು. ಮನುಷ್ಯನ ದೇಹದ ಮೇಲೆ ಪರಿಣಾಮ ಬೀರುವ ಸಾಹಿತ್ಯವೇ ಭಜನೆ ಎಂದು ಜ್ಯೋತಿಷಿ, ಅಂಕಣಕಾರ ಪ್ರಕಾಶ್ ಅಮ್ಮಣ್ಣಾಯ ಕಾಪು ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಮಜೂರು ಕರಂದಾಡಿ ಶ್ರೀವಿಷ್ಣುಮೂರ್ತಿ ದೇವಳದ ಆವರಣದಲ್ಲಿ ಶನಿವಾರ ಆಯೋಜಿಸಲಾದ ಪುರಂದರದಾಸರ ಚತುರ್ಶತಮಾನೋತ್ಸವ ಸಮಿತಿಯ ದತ್ತಿ ಉಪನ್ಯಾಸದಲ್ಲಿ ಅವರು ದಾಸಸಾಹಿತ್ಯದ ಕುರಿತು ಮಾತನಾಡುತ್ತಿದ್ದರು.

ಯಕ್ಷಗಾನ ಬಯಲಾಟ ಪರಂಪರೆಯ ಬಗ್ಗೆ ಮಾತನಾಡಿದ ಹಿರಿಯ ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ, ಯಕ್ಷಗಾನ ಜನಮನದ ನಾಡಿ ಯನ್ನು ತಟ್ಟುತ್ತದೆ. ಪುರಾಣ ಪ್ರಸಂಗಗಳನ್ನು ರಂಗಸ್ಥಳಕ್ಕೆ ತರುವ, ರಂಗದ ಮೇಲೆ ವಿವಿಧ ಲೋಕಗಳನ್ನು ಸುತ್ತಲು ಅವಕಾಶ ಮಾಡಿಕೊಡುವ, ರಂಗದ ನಿರಂತರತೆ ಯನ್ನು ಕಾಪಾಡಿಕೊಳ್ಳುವ ವಿಶೇಷತೆ ಯಕ್ಷಗಾನಕ್ಕೆ ಇದೆ. ಯಕ್ಷಗಾನದ್ದು ಸಮೃದ್ಧ ಸಾಹಿತ್ಯವಾಗಿದ್ದು, ದಾಸ ಸಾಹಿತ್ಯಕ್ಕೂ, ಯಕ್ಷಗಾನ ಪ್ರಸಂಗ ಸಾಹಿತ್ಯಕ್ಕೂ ಸಂಬಂಧವಿದೆ. ಆರಾಧನಾ ರಂಗಕಲೆಯೇ ಯಕ್ಷಗಾನ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾವಿದ, ಹಿರಿಯ ಸಮಾಜಸೇವಕ ಲೀಲಾಧರ ಶೆಟ್ಟಿ ಕರಂದಾಡಿ ಮಾತನಾಡಿ, ಸಾಹಿತ್ಯವೇ ಜೀವನಾಡಿಯಾಗಿದ್ದು, ಕನ್ನಡ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಜಾಗೃತಿ ನಿರಂತರವಾಗಿ ನಡೆದು ಹಳ್ಳಿಹಳ್ಳಿಗಳಿಗೂ ತಲುುವಂತಾಗಬೇಕು ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಕರಂದಾಡಿ ದೇವಳದ ಮೊಕ್ತೇಸರ ಪದ್ಮನಾಭ ಶಾನುಬಾಗ್, ಶ್ರೀಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಶ್ರೀರ ಶೆಟ್ಟಿಗಾರ್ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು. ತಾಲೂಕು ಘಟಕದ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಸದಸ್ಯೆ ಪ್ರಜ್ಞಾ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾರ್ಯರ್ಶಿ ವಿದ್ಯಾ ಅಮ್ಮಣ್ಣಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News