ಕಕ್ಕಿಂಜೆ- ನೆರಿಯ- ಪುದುವೆಟ್ಟು ರಸ್ತೆ ಕಾಮಗಾರಿಗೆ ಶಿಲಾನ್ಯಾಸ

Update: 2020-11-22 13:52 GMT

ಬೆಳ್ತಂಗಡಿ: ದೇಶದ ಎಲ್ಲ ಹಳ್ಳಿಗಳಿಗೂ ಒಂದು ವರ್ಷದ ಒಳಗಾಗಿ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಸರಕಾರದಿಂದ ನಡೆಯಲಿದೆ, ಪ್ರತಿ ಹಳ್ಳಿಯ ಮನೆಮನೆಗಳಿಗೆ ಇಂಟರ್‍ನೆಟ್ ಸೌಲಭ್ಯ ಒದಗಿಸುವ ಕಾರ್ಯನಡೆಯಲಿದೆ. ಪ್ರತಿ ಹಳ್ಳಿಗಳ ರಸ್ತೆಯೂ ಅಭಿವೃದ್ಧಿಯಾಗಬೇಕು ಎಂದು ಈ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಧಾನಿಗಳು ಹಾಗೂ ರಾಜ್ಯ ಸರಕಾರದ ಇಚ್ಛಾಶಕ್ತಿಯಂದ ಹಳ್ಳಿಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಅವರು ನೆರಿಯ ಬಳಿ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ ರೂ. 6 ಕೋಟಿ ವೆಚ್ಚದ ಕಕ್ಕಿಂಜೆ- ನೆರಿಯ- ಪುದುವೆಟ್ಟು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಎಷ್ಟು ವರ್ಷ ಶಾಸಕರಾಗಿದ್ದಾರೆ ಎಂಬುದು ಮುಖ್ಯವಲ್ಲ, ಊರಿಗೆ ಏನು ಕೊಡುಗೆ ನೀಡಿದ್ದೀರಿ ಎಂಬುವುದು ಮುಖ್ಯ. ಅದರಲ್ಲೂ 2 ವರ್ಷದಲ್ಲೇ ಶಾಸಕ ಹರೀಶ್ ಪೂಂಜಾ ಜಿಲ್ಲೆಯಲ್ಲೇ ಅತೀ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿ ಮಾಡಿದ್ದಾರೆ ಎಂದರು.

ಶಾಸಕ ಹರೀಶ್ ಪೂಂಜಾ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಸರಕಾರ ಪ್ರತಿ ವಿಚಾರದಲ್ಲೂ ಅನುದಾನವನ್ನು ಹಳ್ಳಿ, ಹಳ್ಳಿಗೂ ಬಿಡುಗಡೆ ಮಾಡುವ ಮೂಲಕ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ. ಸಂಸದರೂ ಈ ಅನುದಾನವನ್ನು ತಾಲೂಕಿನ ಹಳ್ಳಿ, ಹಳ್ಳಿಗೂ ತಲುಪಿಸುವ ಕಾರ್ಯ ಮಾಡಿದ್ದಾರೆ. ನೆರಿಯಾ ಗ್ರಾ.ಪಂ ವ್ಯಾಪ್ತಿಯ ಅಭಿವೃದ್ಧಿಗೆ ಸುಮಾರು 16 ಕೋಟಿ ರೂ. ಕೇವಲ 2 ವರ್ಷದ ಅಭಿವೃದ್ಧಿಗೆ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ನೆರಿಯ ಚರ್ಚ್‍ನ ಧರ್ಮಗುರುಗಳಾದ ಫಾ. ಶಾಜಿ ಮಾಧ್ಯೂ, ಕೊಕ್ಕಡ ಸಿ.ಎ. ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ, ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ, ನ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ರಮೇಶ್ ಇಂಜಿನಿಯರ್, ಶಕ್ತಿ ಕೇಂದ್ರದ ಅಧ್ಯಕ್ಷ ಬಾಬು ಗೌಡ ಪರ್ಕಳ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ್, ಮೊದಲಾದ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News