ಕೊಣಾಜೆ: ಪ್ರತಿಭಾ ಪುರಸ್ಕಾರ, ನಾಯಕತ್ವ ಶಿಬಿರ ಹಾಗೂ ಮಾಹಿತಿ ಕೇಂದ್ರ ಉದ್ಘಾಟನೆ

Update: 2020-11-22 14:28 GMT

ಕೊಣಾಜೆ: ಮಂಗಳಾ ಗ್ರಾಮೀಣ ಯುವಕ ಸಂಘ(ರಿ) ಕೊಣಾಜೆ, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಇದರ ಜಂಟಿ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ನಾಯಕತ್ವ ತರಬೇತಿ ಮತ್ತು ಮಾಹಿತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ರವಿವಾರ ಮಂಗಳಾ ಗ್ರಾಮೀಣ ಯುವಕ ಸಂಘದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರವೀಂದ್ರ ರೈ ಹರೇಕಳ, "ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮೂಡಿಬರಬೇಕಾದರೆ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜಕ್ಕೆ ನಮ್ಮಿಂದಾದ ಕೊಡುಗೆ ನೀಡಬೇಕಿದೆ. ಮನುಷ್ಯರಾದವರು‌ ಮತ್ತೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘ ಸಂಸ್ಥೆಗಳು ಉತ್ತಮ ಕಾರ್ಯಯೋಜನೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು" ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, "ನಾವೆಲ್ಲರೂ ಸಮಾನತೆಯ ಭಾವದೊಂದೊಂದಿಗೆ ಗಾಂಧೀಜಿಯಂತಹ ಮಹಾತ್ಮರು‌ ನೀಡಿದ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ನೈಜ ದೇಶಭಕ್ತರಾಗಲು ಸಾಧ್ಯವಿದೆ. ಮಂಗಳಾ ಗ್ರಾಮೀಣ ಯುವಕ ಸಂಘ ಹಾಗೂ ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಾ ಮುನ್ನಡೆಯುತ್ತಿದೆ" ಎಂದರು.

ಜನಶಿಕ್ಷಣ‌ ಟ್ರಸ್ಟ್ ನ ಶೀನ ಶೆಟ್ಟಿ ಅವರು ನಾಯಕತ್ವ ತರಬೇತಿ ಶಿಬಿರದಲ್ಲಿ‌ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ರಾಧಾಕೃಷ್ಣ ರಾವ್, ಪ್ರಾಧ್ಯಾಪಕ ಡಾ.ಸತೀಶ್ ಶೆಟ್ಟಿ, ಪ್ರತಿಭಾನ್ವಿತೆ ಶ್ರೀರಕ್ಷಾ ಎಸ್.ಎಚ್.ಪೂಜಾರಿ ಹಾಗೂ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಜಯಪ್ರಸಾದ್ ಸಾಲಿಯಾನ್, ತಾಲೂಕು ಪಂಚಾಯಿತಿ ಸದಸ್ಯರಾದ ಪದ್ಮಾವತಿ ಎಸ್ ಪೂಜಾರಿ, ಪಂಚಾಯಿತಿ ಮಾಜಿ ಸದಸ್ಯೆ ವೇದಾವತಿ ಗಟ್ಟಿ , ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ ಕೋಡಿಜಾಲ್, ಮಾಜಿ ಅಧ್ಯಕ್ಷ ರಹ್ಮಾನ್ ಕೋಡಿಜಾಲ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷರಾದ ಅಮೀರ್ ಕೋಡಿಜಾಲ್ ಮೊದಲಾದವರು‌ ಉಪಸ್ಥಿತರಿದ್ದರು.

ಮಂಗಳ ಗ್ರಾಮೀಣ ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುನ್ನಾಸೀರ್ ಕೆ.ಕೆ ಸ್ವಾಗತಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್ ಕೋಡಿಜಾಲ್ ವಂದಿಸಿದರು. ಸುರೇಖಾ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News