×
Ad

ಕರ್ನಾಟಕ ವೃಕ್ಷ ಪ್ರಾಧಿಕಾರ ರಚನೆ ನನೆಗುದಿಗೆ: ಪರಿಸರ ಪ್ರೇಮಿಗಳಿಂದ ಆಕ್ರೋಶ

Update: 2020-11-22 20:14 IST

ಮಂಗಳೂರು, ನ.22: ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ-1976 ರಚನೆಗೊಂಡು ಈಗಾಗಲೇ 44 ವರ್ಷ ಕಳೆದಿದೆ. ಆದಾಗ್ಯೂ, ಕರ್ನಾಟಕ ವೃಕ್ಷ ಪ್ರಾಧಿಕಾರ ರಚನೆ ಆಗದಿರುವುದನ್ನು ರಾಜ್ಯದ ಪರಿಸರ ಪ್ರೇಮಿಗಳ ಖಂಡಿಸಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಮರಗಳ ರಕ್ಷಣೆಗಾಗಿಯೇ ‘ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976’ನ್ನು ರೂಪಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅಧಿಕಾರಾವಧಿಯಲ್ಲಿ ಈ ಕಾಯ್ದೆ ರೂಪುಗೊಂಡಿತ್ತು. ಕಾಯ್ದೆಯಂತೆ ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ವೃಕ್ಷ ಪ್ರಾಧಿಕಾರ ರಚಿಸಬೇಕು. ಮರಗಳ ರಕ್ಷಣೆ ಮತ್ತು ಜಾಗೃತಿಗಾಗಿ ಹಲವು ನಿಯಮಗಳನ್ನು ಕಾಯ್ದೆಯಲ್ಲಿ ರೂಪಿಸಲಾಗಿದೆ. 2014ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅದರಲ್ಲಿಯೂ ನಿಯಮಾವಳಿಗಳನ್ನು ಮುಂದುವರಿಸಲಾಗಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಪರಿಸರಕ್ಕೆ ಎಲ್ಲೆಡೆ ಪೆಟ್ಟು ನೀಡಲಾಗುತ್ತಿದೆ. ಮನುಷ್ಯನು ಅಭಿವೃದ್ಧಿ ಹಾಗೂ ಸಮಸ್ಯೆ ಹೆಸರಿನಲ್ಲಿ ಪರಿಸರಕ್ಕೆ ಆಘಾತ ನೀಡುತ್ತಿದ್ದಾನೆ. ಮರ ತೆರವಿಗೆ ಸಂಬಂಧಿಸಿ ಅರಣ್ಯ ಇಲಾಖೆಗೆ ದಿನವೊಂದಕ್ಕೆ ಕನಿಷ್ಠ 50ರಷ್ಟು ಅರ್ಜಿಗಳು ಬರುತ್ತವೆ. 50ಕ್ಕಿಂತ ಹೆಚ್ಚು ಮರ ಕಡಿಯಬೇಕಿದ್ದರೆ ವೃಕ್ಷ ಪ್ರಾಧಿಕಾರದ ಅನುಮತಿ ಕಡ್ಡಾಯ. ಆದರೆ ಪ್ರಸ್ತುತ ಪ್ರಾಧಿಕಾರ ರಚನೆಯಾಗದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೇ ಈ ಅರ್ಜಿ ವಿಲೇವಾರಿ ಮಾಡುತ್ತಿದ್ದಾರೆ. ಅಧಿಕಾರಿಗಳು ಒಂದಷ್ಟು ಮೊತ್ತ ಪಡೆದು ಮರಗಳನ್ನು ಕಡಿಯಲು ಅನುಮತಿ ನೀಡುತ್ತಾರೆ. ಆ ಹಣ ಪರ್ಯಾಯ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ವ್ಯಯವಾಗುತ್ತಿಲ್ಲ. ಪ್ರಾಧಿಕಾರ ರಚನೆಯಾದರೆ ಕಾರಣವಿಲ್ಲದೆ ಮರ ಕಡಿಯುವುದಕ್ಕೆ ಕಡಿವಾಣ ಬೀಳಲಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ನಗರ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಪಿಡಬ್ಲೂಡಿ ಅಧಿಕ್ಷಕ ಇಂಜಿನಿಯರ್, ನಗರ ಸ್ಥಳೀಯ ಸಂಸ್ಥೆಯ ಆಯುಕ್ತ ಮತ್ತು ಓರ್ವ ಸಸ್ಯಶಾಸ್ತ್ರಜ್ಞ ಅಥವಾ ಪರಿಸರ ಶಾಸ್ತ್ರಜ್ಞ ಪ್ರಾಧಿಕಾರದ ಸದಸ್ಯರು. ಜತೆಗೆ ಸರಕಾರೇತರ ಸಂಘಟನೆಗಳ ಮೂವರು ಪ್ರತಿನಿಧಿಗಳನ್ನು ಮರ ಸಂರಕ್ಷಣಾ ಪ್ರಾಧಿಕಾರದಲ್ಲಿ ನೇಮಕ ಮಾಡಬೇಕು.

ಗ್ರಾಮೀಣ ವ್ಯಾಪ್ತಿಯಲ್ಲಿಯೂ ಸಿಸಿಎಫ್ ಅಧ್ಯಕ್ಷರಾಗಿದ್ದು, ಜಿಲ್ಲಾಧಿಕಾರಿ ಅಥವಾ ಅಥವಾ ಅವರಿಂದ ನೇಮಿಸಲ್ಪಟ್ಟ ಸಹಾಯಕ ಆಯುಕ್ತ ದರ್ಜೆ ಹೊಂದಿರುವ ಅಧಿಕಾರಿ, ವ್ಯಾಪ್ತಿಯ ಪಿಡಬ್ಲೂಡಿ ಅಧಿಕ್ಷಕ ಇಂಜಿನಿಯರ್ ಮತ್ತು ಇಬ್ಬರು ಅಧಿಕಾರಿಯೇತರ ಸದಸ್ಯರು- ಪರಿಸರ ಸಂರಕ್ಷಣೆಗೆ ಸಂಬಂಧಿಸಿ ಸರಕಾರದಿಂದ ನೇಮಿಸಲ್ಪಟ್ಟವರು. ತನ್ನ ವ್ಯಾಪ್ತಿಯಲ್ಲಿ ವೃಕ್ಷ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಜವಾಬ್ದಾರಿ ಪ್ರಾಧಿಕಾರ ಮೇಲಿದ್ದು, ಮರಗಳನ್ನು ಸಂರಕ್ಷಿಸುವುದು, ಮರಗಳ ಗಣತಿ, ಗಿಡಗಳನ್ನು ನೆಟ್ಟು ಪೋಷಿಸುವುದು ಮುಖ್ಯವಾಗಿದೆ ಎನ್ನುತ್ತವೆ ಮೂಲಗಳು.

ಕರ್ನಾಟಕ ವೃಕ್ಷ ಪ್ರಾಧಿಕಾರ ರಚಿಸಿ, ಪದಾಧಿಕಾರಿಗಳ ಪಟ್ಟಿಯನ್ನು ಎರಡು-ಮೂರು ಬಾರಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರದಿಂದ ಈ ಕುರಿತು ಅಧಿಸೂಚನೆ ಬಂದಿಲ್ಲ. ಸರಕಾರದಿಂದ ಅಂಕಿತ ಬಿದ್ದ ತಕ್ಷಣ ಪ್ರಾಧಿಕಾರ ಕಾರ್ಯಾರಂಭಿಸಲಿದೆ.
ಡಾ.ವಿ.ಕರಿಕಾಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ

ಮಂಗಳೂರು ಸಮೀಪದ ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಮರಗಳನ್ನು ಕಡಿಯುವ ಪ್ರಸ್ತಾಪ ಬಂದಾಗಲೇ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ವೃಕ್ಷ ಪ್ರಾಧಿಕಾರ ರಚಿಸುವಂತೆ ಮನವಿ ಸಲ್ಲಿಸಿದ್ದೆವು. ಆದರೆ ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ.
-ಶಶಿಧರ್ ಶೆಟ್ಟಿ, ಪ್ರ.ಕಾರ್ಯದರ್ಶಿ,ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News