ಮಲೈಕಾ ಸೊಸೈಟಿ ಹೆಸರಲ್ಲಿ ವಂಚನೆ ಆರೋಪ: ಮ್ಯಾನೇಜರ್ ಬಂಧನ

Update: 2020-11-22 15:20 GMT

ಮಂಗಳೂರು, ನ.22: ಮಲೈಕಾ ಸೊಸೈಟಿ ಹೆಸರಲ್ಲಿ ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಪೂರ್ಣಗೊಂಡಾಗ ಅದನ್ನು ಹಿಂದಿರುಗಿಸದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಂಗಳೂರು ಶಾಖೆಯ ಮ್ಯಾನೇಜರ್‌ವೊಬ್ಬರನ್ನು ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧಗಳ ಪೊಲೀಸರು ಬಂಧಿಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮ್ಯಾನೇಜರ್ ರೀನಾ ಜೋಶ್ ಎಂಬವರನ್ನು ಬಂಧಿಸಿರುವ ಪೊಲೀಸರು ಬೆಂದೂರ್‌ವೆಲ್‌ನಲ್ಲಿರುವ ಪ್ರಧಾನ ಕಚೇರಿಗೆ ಕರೆ ತಂದು ತನಿಖೆ ನಡೆಸಿ, ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಮುಂಬೈ, ಮಂಗಳೂರು, ಉಡುಪಿ ಸಹಿತ ವಿವಿಧೆಡೆ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಶಾಖೆಗಳನ್ನು ಹೊಂದಿದೆ. ಆಕರ್ಷಕ ಗರಿಷ್ಠ ಬಡ್ಡಿ ನೀಡುವ ಆಮಿಷ ತೋರಿಸಿ 800ಕ್ಕೂ ಅಧಿಕ ಮಂದಿ 350 ಕೋಟಿ ರೂ.ಗಿಂತಲೂ ಅಧಿಕ ಹಣ ಠೇವಣಿ ಇಡುವಂತೆ ಮಾಡಿದ್ದಾರೆ. ಠೇವಣಿ ಬಡ್ಡಿ ಸಮೇತ ಹಿಂದಿರುಗಿಸುವ ಸಮಯವಾದರೂ ಹಣ ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಮಲೈಕಾ ಸೊಸೈಟಿ ಮಂಗಳೂರು ಶಾಖೆಯ ಮ್ಯಾನೇಜರ್ ರೀನಾ ಜೋಶ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News