ತ್ರಿಪುರಾ ಪ್ರತಿಭಟನೆಯಲ್ಲಿ ಮೃತರ ಸಂಖ್ಯೆ ಎರಡಕ್ಕೇರಿಕೆ

Update: 2020-11-22 16:31 GMT

 ಅಗರ್ತಲಾ,ನ.22: ತೀವ್ರವಾಗಿ ಗಾಯಗೊಂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೋರ್ವರು ರವಿವಾರ ಕೊನೆಯುಸಿರೆಳೆದಿದ್ದು,ತ್ರಿಪುರಾದ ಪಾನಿಸಾಗರ್ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆಗಳ ಸಂದರ್ಭ ಮೃತರ ಸಂಖ್ಯೆ ಎರಡಕ್ಕೇರಿದೆ.

ಕಂಚನಪುರ ಉಪವಿಭಾಗದಲ್ಲಿ 6,000ಕ್ಕೂ ಅಧಿಕ ಬ್ರು ನಿರಾಶ್ರಿತರನ್ನು ಪುನರ್ವಸತಿಗೊಳಿಸುವ ಸರಕಾರದ ಯೋಜನೆಯನ್ನು ವಿರೋಧಿಸಿ ಅಸ್ಸಾಂ-ಅಗರ್ತಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯನ್ನೊಡ್ಡಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದಾಗ ಬಡಗಿ ವೃತ್ತಿಯ ಶ್ರೀಕಾಂತ ದಾಸ್ (43) ಮೃತಪಟ್ಟಿದ್ದು,ಇತರ ಕನಿಷ್ಠ 23 ಜನರು ಗಾಯಗೊಂಡಿದ್ದರು.

ಪ್ರತಿಭಟನಾಕಾರರಿಂದ ಹಲ್ಲೆಗೀಡಾಗಿ ತೀವ್ರವಾಗಿ ಗಾಯಗೊಂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬಿಸ್ವಜಿತ್ ದೆಬ್ಬಾರ್ಮಾ ರವಿವಾರ ಜಿಪಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಕಂಚನಪುರದಲ್ಲಿ ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿದ್ದ ಬೆಂಗಾಳಿಗಳು ಮತ್ತು ಸ್ಥಳೀಯ ಮಿರೆಗಳನ್ನೊಳಗೊಂಡ ಜಂಟಿ ಆಂದೋಲನ ಸಮಿತಿ (ಜೆಎಂಸಿ)ಯು ಶನಿವಾರ ಹೆದ್ದಾರಿಯಲ್ಲಿ ತಡೆಯೊಡ್ಡಿತ್ತು.

 ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಜೆಎಂಸಿ ಆರೋಪಿಸಿದರೆ,ಹಿಂಸೆಗಿಳಿದಿದ್ದ ಗುಂಪು ಭದ್ರತಾ ಸಿಬ್ಬಂದಿಗಳ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸುವುದು ಅನಿವಾರ್ಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ತನ್ಮಧ್ಯೆ,ಅನಿರ್ದಿಷ್ಟಾವಧಿ ಮುಷ್ಕರವು ರವಿವಾರ ಏಳನೇ ದಿನವನ್ನು ಪ್ರವೇಶಿಸಿದ್ದು, ಕಂಚನಪುರದಲ್ಲಿ ಮುಂದುವರಿದಿದೆ ಎಂದು ಜೆಎಂಸಿ ಅಧ್ಯಕ್ಷ ಝೈರೆಮಥಿಮಿಯಾ ಪಚಾವು ತಿಳಿಸಿದ್ದಾರೆ.

ಪೊಲೀಸ್ ಗೋಲಿಬಾರ್ ಕುರಿತು ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸಿರುವ ರಾಜ್ಯ ಸರಕಾರವು ಮೃತರ ಕುಟುಂಬಗಳಿಗೆ ಐದು ಲ.ರೂ.ಪರಿಹಾರವನ್ನು ಪ್ರಕಟಿಸಿದೆ.

ಉತ್ತರ ತ್ರಿಪುರಾ ಜಿಲ್ಲಾ ದಂಡಾಧಿಕಾರಿ ನಾಗೇಶ ಕುಮಾರ ಅವರು ತನಿಖೆಯನ್ನು ನಡೆಸಲಿದ್ದು,ಒಂದು ತಿಂಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ರಾಜ್ಯದ ಕಾನೂನು ಸಚಿವ ರತನಲಾಲ್ ನಾಥ್ ತಿಳಿಸಿದರು.

ಮುಖ್ಯಮಂತ್ರಿ ಬಿಪ್ಲಬ್ ಕುಮಾರ ದೇಬ್ ಅವರು ಶನಿವಾರ ರಾತ್ರಿ ಉಪ ಮುಖ್ಯಮಂತ್ರಿ ಜಿಷ್ಣು ದೇವಬರ್ಮಾ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News