ಗಾಂಜಾ ಪ್ರಕರಣ: ಭಾರತಿ ಸಿಂಗ್ ದಂಪತಿಗೆ ಡಿ. 4ರವರೆಗೆ ನ್ಯಾಯಾಂಗ ಬಂಧನ

Update: 2020-11-22 16:41 GMT

 ಮುಂಬೈ,ನ.22: ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿರುವ ಕಾಮಿಡಿಯನ್ ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ ಲಿಂಬಾಚಿಯಾ ಅವರಿಗೆ ರವಿವಾರ ಇಲ್ಲಿಯ ನ್ಯಾಯಾಲಯವು ಡಿ.4ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶಿಸಿದೆ. ಅಂಧೇರಿಯಲ್ಲಿರುವ ಸಿಂಗ್ ದಂಪತಿಗಳ ಮನೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಗಾಂಜಾ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಶನಿವಾರ ಭಾರತಿ ಸಿಂಗ್ ಅವರನ್ನು ಬಂಧಿಸಿದ್ದ ಮಾದಕದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ)ವು,ರವಿವಾರ ಬೆಳಗಿನ ಜಾವ ಲಿಂಬಾಚಿಯಾರನ್ನು ಬಂಧಿಸಿದೆ.

ಸಿಂಗ್ ದಂಪತಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸೋಮವಾರ ನಡೆಯಲಿದೆ.

ಲಿಂಬಾಚಿಯಾ ವಿಚಾರಣೆಗಾಗಿ ಅವರನ್ನು ತನ್ನ ವಶಕ್ಕೆ ನೀಡುವಂತೆ ಕೋರಿದ್ದ ಎನ್‌ಸಿಬಿ, ಸಿಂಗ್ ಅವರ ಕಸ್ಟಡಿಯನ್ನು ಕೇಳಿರಲಿಲ್ಲ. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬಹುದು ಎಂದು ಅದು ನ್ಯಾಯಾಲಯಕ್ಕೆ ತಿಳಿಸಿತ್ತು.

ಎನ್‌ಸಿಬಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿರುವ ಗಾಂಜಾದ ಪ್ರಮಾಣವು ಎನ್‌ಡಿಪಿಎಸ್ ಕಾಯ್ದೆಯಡಿ ನಿಗದಿ ಪಡಿಸಿರುವ ‘ಸಣ್ಣ ಪ್ರಮಾಣ’ಕ್ಕಿಂತ ಕಡಿಮೆಯಿರುವುದರಿಂದ ಕಸ್ಟಡಿ ವಿಚಾರಣೆಯ ಪ್ರಶ್ನೆಯೇ ಇಲ್ಲ ಎಂದು ಸಿಂಗ್ ದಂಪತಿ ಪರ ವಕೀಲ ಅಯಾಝ್ ಖಾನ್ ವಾದಿಸಿದರು. ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ದಂಪತಿಗಳನ್ನು ಡಿ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಸಿಂಗ್ ದಂಪತಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಮ್‌ಗಳಡಿ ಪ್ರಕರಣ ದಾಖಲಾಗಿದ್ದು,ಈ ಕಲಮ್‌ಗಳಡಿ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ಇದು ಆರೋಪಿಗಳ ಬಂಧನ ಅಗತ್ಯವಾಗಿರುವ ಪ್ರಕರಣವಲ್ಲ. ವಶಪಡಿಸಿಕೊಳ್ಳಲಾಗಿರುವ ಗಾಂಜಾದ ಪ್ರಮಾಣ ಎನ್‌ಡಿಪಿಎಸ್ ಕಾಯ್ದೆಯಡಿ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಿರುವುದರಿಂದ ಎನ್‌ಸಿಬಿ ಇಂತಹ ಕ್ರಮವನ್ನು ಕೈಗೊಂಡಿರುವುದು ತನಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಖಾನ್ ಸುದ್ದಿಗಾರರಿಗೆ ತಿಳಿಸಿದರು.

 ತಾವು ಗಾಂಜಾ ಸೇವಿಸಿದ್ದೇವೆ ಎಂದು ಸಿಂಗ್ ದಂಪತಿಗಳು ಒಪ್ಪಿಕೊಂಡಿದ್ದಾರೆ ಎಂಬ ಎನ್‌ಸಿಬಿ ಹೇಳಿಕೆಯ ಕುರಿತು ಅವರು,ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶದಂತೆ ಎನ್‌ಸಿಬಿ ಅಥವಾ ಅದರ ಅಧಿಕಾರಿಗಳ ಎದುರು ನೀಡಲಾಗುವ ಯಾವುದೇ ಹೇಳಿಕೆಗೆ ಮಾನ್ಯತೆಯಿಲ್ಲ ಎಂದು ತಿಳಿಸಿದರು.

ಎನ್‌ಡಿಪಿಎಸ್ ಕಾಯ್ದೆಯಡಿ 1,000 ಗ್ರಾಮ್‌ವರೆಗೆ ಗಾಂಜಾವನ್ನು ‘ಸಣ್ಣ ಪ್ರಮಾಣ’ ಎಂದು ಪರಿಗಣಿಸಲಾಗುತ್ತದೆ ಮತ್ತು ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. 20 ಕೆ.ಜಿ ಅಥವಾ ಹೆಚ್ಚು ಗಾಂಜಾ ಹೊಂದಿದ್ದರೆ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ಇವೆರಡರ ನಡುವಿನ ಪ್ರಮಾಣದ ಗಾಂಜಾ ಹೊಂದಿದ್ದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದು ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News