ಪ್ರಕರಣ ಹಿಂಪಡೆಯಲು ನಿರಾಕರಿಸಿದ ದಲಿತ ಸಹೋದರರಿಗೆ ಥಳಿಸಿ, ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Update: 2020-11-22 17:14 GMT

ಭೋಪಾಲ್, ನ. 22: ಹದಿನೈದು ಜನರ ಗುಂಪೊಂದು ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಸಹೋದರರನ್ನು ಥಳಿಸಿ ಅವರ ಮನೆಗೆ ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ದಲಿತ ಕುಟುಂಬದ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೇತನ ಪಾವತಿ ಕುರಿತ ವಿವಾದಕ್ಕೆ ಸಂಬಂಧಿಸಿ ಸಂದೀಪ್ ದೊಹಾರೆ ಸಹೋದರ ಶಾಂತಾರಾಮ್ ದೊಹಾರೆ ಪ್ರವೀಣ್ ಯಾದವ್ ವಿರುದ್ಧ 2018ರಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ಆರೋಪಿಯ ವಿರುದ್ಧ ಪ.ಜಾ. ಹಾಗೂ ಪ.ಪಂ. (ದೌರ್ಜನ್ಯ ತಡೆ) ಕಾಯ್ದೆ ಅಡಿಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಆರೋಪಿ ಯಾದವ್‌ನ ಕುಟುಂಬ ಪ್ರಕರಣ ಹಿಂಪಡೆಯುವಂತೆ ಶಾಂತಾರಾಮ್ ದೊಹಾರೆಗೆ ಒತ್ತಡ ಹೇರುತ್ತಿತ್ತು. ಆದರೆ, ಅವರು ನಿರಾಕರಿಸಿದ್ದರು. ಇದರಿಂದ ಆಕ್ರೋಶಿತನಾದ ಪವನ್ ಯಾದವ್, ಆತನ ಕುಟಂಬದ ಸದಸ್ಯರು ಹಾಗೂ ನೆರೆ ಹೊರೆಯವರನ್ನು ಒಳಗೊಂಡ 10-12 ಜನರಿದ್ದ ತಂಡ 5 ಬೈಕ್‌ಗಳಲ್ಲಿ ದೊಹಾರೆ ಸಹೋದರರ ಮನೆಗೆ ಆಗಮಿಸಿತು. ಮನೆಪ್ರವೇಶಿಸಿದ ತಂಡ ಸಹೋದರರ ಮೇಲೆ ರೈಫಲ್ ಹಾಗೂ ಕೊಡಲಿಯಿಂದ ಹಲ್ಲೆ ನಡೆಸಿ, ಮನೆಗೆ ಬೆಂಕಿ ಹಚ್ಚಿತು. ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿತು. ಈ ಶಬ್ದ ಕೇಳಿ ಕೆಲವು ಗ್ರಾಮಸ್ಥರು ಮನೆಯಿಂದ ಹೊರಬಂದರು ಹಾಗೂ ಆಕ್ರೋಶಿತರಾಗಿ ದುಷ್ಕರ್ಮಿಗಳ ಮೂರು ಬೈಕ್‌ಗಳಿಗೆ ಬೆಂಕಿ ಹಚ್ಚಿದರು. ದುಷ್ಕರ್ಮಿಗಳು ಉಳಿದ ಬೈಕ್ ನೊಂದಿಗೆ ಪರಾರಿಯಾದರು ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News