ಮೊಡೆರ್ನಾದ ಕೋವಿಡ್-19 ಲಸಿಕೆಗೆ ಗರಿಷ್ಠ 2,774 ರೂ. ದರ

Update: 2020-11-22 18:05 GMT

ಫ್ರಾಂಕ್‌ಫರ್ಟ್,ನ.22: ತಾನು ಸಂಶೋಧಿಸಿರುವ ಕೋವಿಡ್-19 ಲಸಿಕೆಯನ್ನು ಪ್ರತಿ ಡೋಸ್‌ಗೆ 25 ಡಾಲರ್ (ಅಂದಾಜು 1,854 ರೂ.) ಹಾಗೂ 37 ಡಾಲರ್ (ಅಂದಾಜು 2,744 ರೂ.) ನಡುವಿನ ದರದಲ್ಲಿ ಸರಕಾರಗಳಿಗೆ ಮಾರಾಟ ಮಾಡಲು ನಿರ್ಧರಿಸಿರುವುದಾಗಿ ಬಹುರಾಷ್ಟ್ರೀಯ ಔಷಧಿ ತಯಾರಿಕಾ ಸಂಸ್ಥೆ ಮೊಡೆರ್ನಾ ಶನಿವಾರ ತಿಳಿಸಿದೆ.

  ‘‘ನಮ್ಮ ಕೋವಿಡ್-19 ಲಸಿಕೆಯು ಹೆಚ್ಚು ಕಮ್ಮಿ ಫ್ಲೂ ಲಸಿಕೆಯಷ್ಟೇ ದರವನ್ನು ಹೊಂದಿರುವುದಾಗಿ ಮೊಡೆರ್ನಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟಿಫೇನ್ ಬಾನ್ಸೆಲ್ ತಿಳಿಸಿದ್ದಾರೆ.

  ಕಳೆದ ಸೋಮವಾರ ಯುರೋಪಿಯನ್ ಆಯೋಗವು ಮೊಡೆರ್ನಾ ಕಂಪೆನಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ನೂತನ ಕೋವಿಡ್-19 ಲಸಿಕೆಯನ್ನು ಪ್ರತಿ ಡೋಸ್‌ಗೆ 25 ಡಾಲರ್ (ಅಂದಾಜು 1,854 ರೂ.)ಗಿಂತಲೂ ಕಡಿಮೆ ದರದಲ್ಲಿ ಲಕ್ಷಾಂತರ ಡೋಸ್‌ಗಳನ್ನು ಪೂರೈಕೆ ಮಾಡಬೇಕೆಂದು ಕೋರಿದ್ದರೆಂದು ಯುರೋಪ್ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದ್ದ್ಜಾರೆ.

 ಆದಾಗ್ಯೂ ಈ ಕುರಿತು ಯಾವುದೇ ಒಪ್ಪಂದಕ್ಕೆ ಸಹಿಹಾಕಿಲ್ಲವೆಂದು ಮೊಡೆರ್ನಾ ಸ್ಪಷ್ಟಪಡಿಸಿದೆ. ಯುರೋಪ್‌ಗೆ ಲಸಿಕೆಗಳನ್ನು ಪೂರೈಕೆ ಮಾಡಲು ನಾವು ಬಯಸಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ರಚನಾತ್ಮಕ ಮಾತುಕತೆಗಳು ನಡೆಯುತ್ತಿವೆ’’ ಎಂದು ಬಾನ್ಸೆಲ್ ತಿಳಿಸಿದ್ದಾರೆ.

 ಕೋವಿಡ್-19 ಸೋಂಕನ್ನು ತಡೆಗಟ್ಟುವಲ್ಲಿ ತನ್ನ ಪ್ರಾಯೋಗಿಕ ಲಸಿಕೆಯು ಶೇ.94.5 ರಷ್ಟು ಪರಿಣಾಮಕಾರಿಯಾಗಿದೆಯೆಂದು ಮೊಡೆರ್ನಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News