ಪ್ರಧಾನಿ ಮೋದಿಯ ವಿದೇಶ ಪ್ರವಾಸ ರಹಿತ ವರ್ಷವಾಗಲಿದೆ 2020

Update: 2020-11-23 07:28 GMT

ಹೊಸದಿಲ್ಲಿ: ಮೊದಲ ಬಾರಿ ತಾವು ಅಧಿಕಾರ ಸ್ವೀಕರಿಸಿದ ವರ್ಷವಾದ 2014ರಿಂದ ಎರಡನೇ ಅಧಿಕಾರಾವಧಿಯ ನವೆಂಬರ್ 2019ರ ತನಕ ಬರೋಬ್ಬರಿ 96 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಮೊದಲ ಬಾರಿಗೆ ಈ ವರ್ಷ ಯಾವುದೇ ವಿದೇಶ ಪ್ರವಾಸ ಕೈಗೊಂಡಿಲ್ಲ. ಕೋವಿಡ್ ಸಾಂಕ್ರಾಮಿಕದಿಂದಾಗಿ ಈ ವರ್ಷದ ಆರಂಭದಿಂದ ಹಿಡಿದು ಇಲ್ಲಿಯ ತನಕ ಪ್ರಧಾನಿ ಮೋದಿ ಯಾವುದೇ ಇತರ ದೇಶಕ್ಕೆ ಪ್ರಯಾಣ ಬೆಳೆಸಿಲ್ಲ ಹಾಗೂ ಡಿಸೆಂಬರ್ ಅಂತ್ಯದವರೆಗೂ ಅವರು ಯಾವುದೇ ವಿದೇಶ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಕಡಿಮೆ. ಹಾಗಾದಲ್ಲಿ ಅವರ ಆಡಳಿತ ಅವಧಿಯಲ್ಲಿ ಒಂದು ವರ್ಷ ಅವಧಿಯಲ್ಲಿ ಅವರು ಯಾವುದೇ ವಿದೇಶ ಪ್ರವಾಸ ಕೈಗೊಳ್ಳದೇ ಇರುವುದು.

ಪ್ರಧಾನಿ ಮೋದಿ ಕೊನೆಯ ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು ನವೆಂಬರ್ 2019ರಲ್ಲಿ. ಆಗ ಅವರು ಬ್ರೆಝಿಲ್ ಗೆ ಭೇಟಿ ನೀಡಿದ್ದರು. ಅಧಿಕಾರ ಸ್ವೀಕರಿಸಿದ್ದ ಮೊದಲ ವರ್ಷವಾದ 2014ರಲ್ಲಿ ಎಂಟು ದೇಶಗಳಿಗೆ ಭೇಟಿ ನೀಡಿದ್ದ ಪ್ರಧಾನಿ, 2015ರಲ್ಲಿ 23 ದೇಶಗಳಿಗೆ, 2016ರಲ್ಲಿ 17 ದೇಶಗಳಿಗೆ ಹಾಗೂ ನಂತರದ ಮೂರು ವರ್ಷಗಳಲ್ಲಿ ಕ್ರಮವಾಗಿ 14, 20 ಹಾಗೂ 14 ದೇಶಗಳಿಗೆ ಭೇಟಿ ನೀಡಿದ್ದರು.

ಈ ವರ್ಷ ವಿದೇಶ ಪ್ರವಾಸ ಕೈಗೊಳ್ಳದ ಮೋದಿ, ಬಿಹಾರಕ್ಕೆ ನಾಲ್ಕು ಬಾರಿ ಚುನಾವಣಾ ಪ್ರಚಾರಕ್ಕಾಗಿ ಹಾಗೂ ಅಯ್ಯೋಧ್ಯೆಗೆ ರಾಮ ಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News