ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನ

Update: 2020-11-23 16:49 GMT

ಗುವಾಹಟಿ, ನ. 23: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಸ್ಸಾಂ ನ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ತರುಣ್ ಗೊಗೋಯ್ ಸೋಮವಾರ ಸಂಜೆ ನಿಧನರಾಗಿರುವುದಾಗಿ ವರದಿಯಾಗಿದೆ.

50 ವರ್ಷಗಳ ರಾಜಕೀಯ ಬದುಕಿನಲ್ಲಿ ಆರು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಗೊಗೊಯ್ ಪಿವಿ ನರಸಿಂಹರಾವ್ ಪ್ರಧಾನಿಯಾಗಿದ್ದಾಗ 1991-96 ರ ತನಕ ಕೇಂದ್ರ ಸಚಿವರಾಗಿ, 2001ರ ಬಳಿಕ  ಮೂರು ಬಾರಿ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಆಗಸ್ಟ್‌ನಲ್ಲಿ ಕೊರೋನ ಸೋಂಕಿಗೆ ಒಳಗಾಗಿದ್ದ 84 ವರ್ಷದ ಗೊಗೋಯ್ ಅಕ್ಟೋಬರ್‌ನಲ್ಲಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ನವೆಂಬರ್ 2ರಂದು ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಬಳಿಕ ಅವರನ್ನು ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಗೊಗೋಯ್ ಕಿಡ್ನಿಗೆ ಸಂಬಂಧಿಸಿ ಸಮಸ್ಯೆಯಿಂದಲೂ ಬಳಲುತ್ತಿದ್ದು ಅವರ ಆರೋಗ್ಯಸ್ಥಿತಿ ನಿರಂತರ ಕ್ಷೀಣಿಸುತ್ತಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗೊಗೋಯ್‌ರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಅಸ್ಸಾಂನಲ್ಲಿ ಸುದೀರ್ಘಾವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ದಾಖಲೆ ತರುಣ್ ಗೊಗೋಯ್‌ರದ್ದಾಗಿದೆ. ಪತ್ನಿ ಡಾಲಿ, ಪುತ್ರಿ ಚಂದ್ರಿಮಾ ಹಾಗೂ ಪುತ್ರ(ಕಾಂಗ್ರೆಸ್ ಸಂಸದ) ಗೌರವ್‌ರನ್ನು ಅಗಲಿದ್ದಾರೆ. ತರುಣ್ ಗೊಗೋಯ್ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್ ಸಹಿತ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News