ನೆಹರೂ ಒಬ್ಬ ವ್ಯಕ್ತಿಯಲ್ಲ; ಅದೊಂದು ಸಿದ್ಧಾಂತ: ಹರ್ಷಕುಮಾರ್ ಕುಗ್ವೆ

Update: 2020-11-23 13:58 GMT

ಉದ್ಯಾವರ, ನ. 23: ಈ ಇಂಟರ್‌ನೆಟ್ ಯುಗದಲ್ಲಿ ದುರುದ್ದೇಶಪೂರಿತ ವಾಗಿ ಮೂಲಭೂತವಾದಿಗಳು ನೆಹರೂ ಅವರನ್ನು ತುಚ್ಚವಾಗಿ ಬಿಂಬಿಸುವ ಕೆಲಸವನ್ನು ಸತತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ನೆಹರೂ ಈ ದೇಶವನ್ನು ಜಾತ್ಯಾತೀತ ನೆಲೆಯ ಆಧಾರದಲ್ಲಿ ಕಟ್ಟಿದವರು. ನೆಹರೂ ಒಬ್ಬ ವ್ಯಕ್ತಿಯಲ್ಲ, ಅದೊಂದು ಸಿದ್ದಾಂತ, ಅದೊಂದು ಆಲೋಚನೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಹೇಳಿದ್ದಾರೆ.

ಉದ್ಯಾವರದ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ನೆಹರೂ ಬಗ್ಗೆ ವಿಡಿಯೋ ಭಾಷಣ ಸ್ಪರ್ಧೆಯ ವಿಜೇತರಿಗೆ ರವಿವಾರ ನಡೆದ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡುತಿದ್ದರು.

ಸ್ವಾತಂತ್ರ ದೊರೆತಾಗ ದೇಶವನ್ನು ಧರ್ಮದ ಆಧಾರದಲ್ಲಿ ಪರಿಗಣಿಸದೇ ಜಾತ್ಯಾತೀತ ನೆಲೆಯಲ್ಲಿ ಪರಿಗಣಿಸಿ ಆಡಳಿತ ನಡೆಸಿದ್ದರ ಪರಿಣಾಮವೇ ಇಂದು ದೇಶ ವಿಶ್ವದ ಮೂರನೇ ಸ್ಥಾನದಲ್ಲಿ ನಿಂತಿದೆ. ಧರ್ಮದ ವಿಷಯದಲ್ಲಿ ತಟಸ್ಥವಾಗಿ ಉಳಿಯಬೇಕು; ಈ ದೇಶದ ಸಮಸ್ಯೆ ಗಳಿಗೆ ಸಮಾಜವಾದ ಮದ್ದು ಎಂದು ಈ ದೇಶದ ಅಭಿವೃದ್ಧಿಗೆ ತಳಪಾಯವನ್ನು ಹಾಕಿದವರು ಎಂದರು.

ಈ ದೇಶದ ವೈವಿದ್ಯತೆಯನ್ನು ಉಳಿಸಿಕೊಂಡು ಪ್ರಜಾಪ್ರಭುತ್ವದ ತಳಹದಿ ಯೊಳಗೆ ದೇಶವನ್ನು ಕಟ್ಟಿದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದು ಗಟ್ಟಿಯಾಗಿ ನಂಬಿದ್ದ ನೆಹರೂ ಅವರ ಕೈಗೆ ದೇಶದ ಚುಕ್ಕಾಣಿ ಸಿಕ್ಕಿದಾಗ ಇದು ಎಂತಹ ದುಸ್ಥಿತಿಯಲ್ಲಿತ್ತು ಎಂಬುದು ಇಂದು ನೆಹರೂರನ್ನು ಹೀನಾಯಿಸುವ ಮಂದಿಗೆ ಗೊತ್ತಿಲ್ಲ. ಅಭಿವೃದ್ಧಿ ಎಂಬುದು ರಾತ್ರೋರಾತ್ರಿ ಆಗುವಂದ್ದು ಎಂಬ ತಪ್ಪುಕಲ್ಪನೆಯಲ್ಲಿರುವವರ ಕೈಯಲ್ಲಿ ಇಂದು ಆಡಳಿತ ಇದೆ. ಇದರಿಂದ ದೇಶಕ್ಕೆ ಹಾನಿಯೇ ವಿನಃ ಪ್ರಯೋಜನವಿಲ್ಲ ಎಂದು ಕುಗ್ವೆ ನುಡಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಪ್ರಸಾದ್‌ರಾವ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ದೊಡ್ಡ ದೊಡ್ಡ ಕೈಗಾರಿಕೆಗಳು ಮತ್ತು ಅಣೆಕಟ್ಟುಗಳು ಆಧುನಿಕ ಭಾರತದ ದೇವಸ್ಥಾನಗಳು ಎಂದು ಸ್ಪಷ್ಟವಾಗಿ ನಂಬಿದ್ದ ನೆಹರೂ, ಒಂದು ಹೊಸ ದೇಶಕ್ಕೆ ಬೇಕಾದ ವಿದೇಶಾಂಗ ನೀತಿಯನ್ನು ಆಧ್ಯಾತ್ಮದ ನೆಲೆಯಲ್ಲಿ ರೂಪಿಸಿದರು. ಇಂದು ಭಾರತ ಶಾಂತಿ ಪ್ರಿಯ ದೇಶ ಎಂದು ಕರೆಸಿಕೊಂಡಿದ್ದರೆ ಅದಕ್ಕೆ ಕಾರಣ ಭಾರತ ರಷ್ಯಾ ಅಥವಾ ಅಮೆರಿಕಾದ ಜೊತೆಗೆ ಹೋಗದೆ ತಟಸ್ಥವಾಗಿರುವುದೇ ಕಾರಣ. ನೆಹರೂ ಅನುಸರಿಸಿದ ಅಲಿಪ್ತ ನೀತಿ ಇಂದು ಭಾರತದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.

ಸಮಾರಂಭದಲ್ಲಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಸಂಸ್ಥೆಯ ಹಿತೈಷಿ ಗಣಪತಿ ಕಾರಂತರನ್ನು ಸಂಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಶೇಖರ್ ಕೆ.ಕೋಟ್ಯಾನ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್‌ಕುಮಾರ್ ಸ್ಪರ್ಧೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ ಆಬಿದ್‌ಆಲಿ ವಿಜೇತರ ಪಟ್ಟಿ ವಾಚಿಸಿದರೆ ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ ವಂದಿಸಿದರು. ಅನುಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News