×
Ad

ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ವಿವಿ ತೆಕ್ಕೆಗೆ

Update: 2020-11-23 19:31 IST

ಮಂಗಳೂರು, ನ.23: ನಗರದಲ್ಲಿರುವ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯವನ್ನು ಮಂಗಳೂರು ವಿವಿ ತೆಕ್ಕೆಗೆ ತರಲು ಪ್ರಯತ್ನ ಸಾಗಿದೆ. ವರ್ಷದ ಹಿಂದಿನ ಪ್ರಸ್ತಾವನೆಗೆ ಮರು ಜೀವ ನೀಡಲಾಗಿದ್ದು, ಎಲ್ಲವೂ ಸುಲಲಿತವಾಗಿ ನಡೆದರೆ 2021-22ನೆ ಸಾಲಿನಿಂದ ಇದು ಕಾರ್ಯ ಗತಗೊಳ್ಳುವ ಸಾಧ್ಯತೆ ಇದೆ.

ನಗರದಲ್ಲಿರುವ ಸುಮಾರು 72 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿ ಪರಿವರ್ತಿಸುವ ಪ್ರಸ್ತಾವನೆ ಇತ್ತು. ಇದನ್ನೀಗ ಅನುಮೋದಿಸಿ ಸರಕಾರಕ್ಕೆ ಸಲ್ಲಿಸುವ ಬಗ್ಗೆ ಮಂಗಳೂರು ವಿವಿ ಸಿಂಡಿಕೆಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಈ ಪ್ರಯತ್ನದ ಬಗ್ಗೆ ಶಿಕ್ಷಕರು, ಶಿಕ್ಷಣಾಧಿಕಾರಿಗಳ ಸಂಘಟನೆ ಗಳು, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಏಕೈಕ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಇದಾಗಿದೆ. ಈ ನಾಲ್ಕು ಜಿಲ್ಲೆಗಳ ಶಾಲಾ ಶಿಕ್ಷಣದ ಮೇಲುಸ್ತುವಾರಿಯನ್ನು ಇದು ಹೊಂದಿದೆ. ಇದು ವಿವಿಯ ಘಟಕ ಸಂಸ್ಥೆಯಾದರೆ ಈ ನಾಲ್ಕು ಜಿಲ್ಲೆಗಳ ಶೈಕ್ಷಣಿಕ ಮೇಲುಸ್ತು ವಾರಿ ರದ್ದುಗೊಳ್ಳಲಿದೆ. ಈ ವಿದ್ಯಾಲಯವು ಮೂರು ವಿಭಾಗಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಬಿಇಡಿ ಶಿಕ್ಷಣ ನೀಡುವುದರೊಂದಿಗೆ ಸೇವಾಂತರ್ಗತ ಶಿಕ್ಷಕರಿಗೆ ತರಬೇತಿ ಹಾಗೂ ಶಿಕ್ಷಣದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ನಡೆಸಲು ಈ ಭಾಗದಲ್ಲಿ ಇತರ ಯಾವುದೇ ಸಂಸ್ಥೆಯು ಇಲ್ಲಂತಾಗುತ್ತದೆ. ಜತೆಗೆ ವಿವಿಧ ಹುದ್ದೆಗಳು ನಷ್ಟಗೊಳ್ಳಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಮಂಗಳೂರು ವಿಶ್ವವಿದ್ಯಾನಿಲಯವು ಸ್ವಾಯತ್ತ ಸಂಸ್ಥೆಯಾಗಿದೆ. ಶುಲ್ಕ ನಿಗದಿಪಡಿಸಲು ವಿವಿಯು ಸ್ವತಂತ್ರವಾಗಿದೆ. ಆದರೆ ಪ್ರಸ್ತುತ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಕನಿಷ್ಠ ಶುಲ್ಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಭಾಗಶ: ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಈ ವ್ಯವಸ್ಥೆ ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಟ್ಟರೆ ಸಹಜವಾಗಿಯೇ ಶುಲ್ಕಗಳು ಏರಿಕೆಯಾಗಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

''ನಗರದ ಹೃದಯ ಭಾಗದಲ್ಲಿರುವ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯವು ಶಿಕ್ಷಕರನ್ನು ಪುನಶ್ಚೇತನಗೊಳಿಸುವ, ಮಾರ್ಗದರ್ಶನ, ತರಬೇತಿ ನೀಡುವ ಪ್ರಧಾನ ಕೇಂದ್ರವಾಗಿದೆ. ಡಿಡಿಪಿಐ, ಬಿಇಒ ಸಹಿತ ಇಲಾಖೆಯ ಅನೇಕ ಪ್ರಮುಖ ಹುದ್ದೆಗಳು ಒಳಪಡುವ ಕೇಂದ್ರ ಇದಾಗಿದೆ. ಆದ್ದರಿಂದ ಈ ವಿದ್ಯಾಲಯವನ್ನು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಗೊಳಿಸಬಾರದು.''

- ರಮ್ಯಾ ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News