ಮುಖವಾಡವನ್ನು ಕಳಚಿ ಬದುಕುವುದನ್ನು ಕಲಿಯಬೇಕು : ಮುಹಮ್ಮದ್‍ ಕುಂಞಿ

Update: 2020-11-23 14:43 GMT

ಭಟ್ಕಳ : ಮನುಷ್ಯ ಹಲವು ಮುಖವಾಡಗಳನ್ನು ಹೊತ್ತು ಬದುಕುತ್ತಿದ್ದು, ಮುಖವಾಡಗಳನ್ನು ಕಳಚಿ ಜೀವನ ನಡೆಸಬೇಕಾದ ಅಗತ್ಯ ಇಂದು ಹೆಚ್ಚಾಗಿದೆ ಎಂದು ಜಮಾಅತೇ ಇಸ್ಲಾಮೀ ಹಿಂದ್‍ ರಾಜ್ಯ ಕಾರ್ಯದರ್ಶಿ, ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್‍ ಕುಂಞಿ ಹೇಳಿದರು.

ನಗರದ ರಾಯಲ್‍ ಓಕ್ ಸಭಾಂಗಣದಲ್ಲಿ ಪ್ರವಾದಿ ಮುಹ್ಮದ್ ಮಾನವತೆಯ ಮಾರ್ಗದರ್ಶಕ ರಾಜ್ಯ ವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ವಿಚಾರ ವಿನಿಮಯ ಹಾಗೂ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸುಳ್ಳುಗಳೇ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಧರ್ಮ, ಆದರ್ಶಗಳು ಆತಂಕವನ್ನುಎದುರಿಸುತ್ತಿವೆ. ವರ್ತಮಾನದ ಸಂಕಟದಿಂದ ಹೊರ ಬರಲು ಆಂತರಿಕ ಸ್ವಚ್ಛತೆಯೊಂದೇ ದಾರಿಯಾಗಿದೆ ಎಂದರು. ನಮ್ಮ ಸುತ್ತ ಮುಖವಾಡಗಳು ಹೆಚ್ಚುತ್ತಲೇ ಇವೆ. ವಿಭಜನೆಯ ಸಿದ್ಧಾಂತಗಳು ಲೋಕವನ್ನು ಆಳುತ್ತಿವೆ. ಜನರು ಭ್ರಮೆಯಲ್ಲಿಯೇ ಬದುಕುತ್ತಿದ್ದು, ಕೊರೋನ ಕಾಲದಲ್ಲಿ ರೋಗಿಗಳನ್ನು ಅಪರಾಧಿಗಳಂತೆ ಕಾಣಲಾದ ಘಟನೆಗಳು ನಡೆದಿವೆ. ಸಮಾಜದಲ್ಲಿ ಕರುಣೆ ಕುಸಿದಿದ್ದು,  ಸಂವಾದ ಮತ್ತು ಚರ್ಚೆಗಳ ಮೂಲಕ ನಾವು ಪರಸ್ಪರ ನಡುವಿನ ಅಂತರವನ್ನುಕಡಿಮೆ ಮಾಡಬಹುದಾಗಿದೆ. ಧರ್ಮ ಧರ್ಮಗಳ ನಡುವೆ ವ್ಯಾಪಕ ಚರ್ಚೆ ನಡೆಯಬೇಕು, ಮಹಿಳೆಯರ ಬಗೆ ನಮ್ಮ ದೃಷ್ಟಿಕೋನಗಳನ್ನು ಬದಲಾಗ ಬೇಕಾಗಿದೆ, ದಾರ್ಶನಿಕರ ಚಿಂತನೆಗಳು ಮರುಕಳಿಸಬೇಕಾಗಿರುವುದು ಅಗತ್ಯವಾಗಿದೆ ಎಂದರು.

ಭಟ್ಕಳ ಅಂಜುಮನ್‍ ಕನ್ನಡ ಉಪನ್ಯಾಸಕ ಪ್ರೋ.ಆರ್.ಎಸ್.ನಾಯಕ್ ಮಾತನಾಡಿದರು.

ಭಟ್ಕಳ ಕನ್ನಡ ಸಾಹಿತ್ಯ ಪರಿಷತ್‍ ಅಧ್ಯಕ್ಷ ಶಂಕರ ನಾಯ್ಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಧಾಕೃಷ್ಣ ಭಟ್, ಭಟ್ಕಳ ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಸಂತೋಷ ನಾಯ್ಕ ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ ಎಂಬ ವಿಷಯದ ಕುರಿತಂತೆ ತಮ್ಮ ವಿಚಾರಗಳನ್ನು ಮಂಡಿಸಿದರು.

ಜಮಾಅತೇ ಇಸ್ಲಾಮಿ ಹಿಂದ್ ಭಟ್ಕಳ ಘಟಕದ ಅಧ್ಯಕ್ಷ  ಅಹ್ಮದ್ ಖಾಝಿ ಸ್ವಾಗತಿಸಿದರು. ಸೀರತ್ ಅಭಿಯಾನದ ಸಂಚಾಲಕ ಮುಹಮ್ಮದ್‍ ರಝಾ ಮಾನ್ವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಜಮಾಅತೇ ಇಸ್ಲಾಮಿ ಹಿಂದ್‍ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿ ಬಾಪಾ ಉಪಸ್ಥಿತರಿದ್ದರು.

''ಶಾಂತಿ, ಸರಳತೆ, ಮಾನವತೆಯ ಸಾಕಾರ ಮೂರ್ತಿಯಾಗಿದ್ದ ಮಹಾತ್ಮಾಗಾಧಿಯ ಭಾವಚಿತ್ರಕ್ಕೆ ಗುಂಡಿಟ್ಟು ವಿಕೃತ ಮನಸ್ಸುಗಳು ಕುಣಿದಾಡುತ್ತಿವೆ. ಗೋಡ್ಸೆಗೆ ಗುಡಿಕಟ್ಟಿ ಸಂತಸ ಪಡುತ್ತಿದ್ದಾರೆ. ಆದರೆ ಗಾಂಧಿಗೆ ಯಾವತ್ತೂ ಸಾವಿಲ್ಲ ಎನ್ನುವುದನ್ನು ಗೋಡ್ಸೆ ಆರಾಧಕರು ಅರಿತುಕೊಳ್ಳಬೇಕು.''

ಪ್ರೋ. ಆರ್.ಎಸ್.ನಾಯಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News