ಜನರಿಗಾಗಿ ಒಳ್ಳೆಯ ಕೆಲಸ ಮಾಡಲು ಅವಕಾಶ: ಜಯಪ್ರಕಾಶ್ ಹೆಗ್ಡೆ

Update: 2020-11-23 15:58 GMT

ಉಡುಪಿ, ನ.23: ಜನರಿಗಾಗಿ ಒಳ್ಳೆಯ ಕೆಲಸ ಮಾಡುವ ಅವಕಾಶವೊಂದನ್ನು ಮುಖ್ಯಮಂತ್ರಿಗಳು ನನಗೆ ನೀಡಿದ್ದಾರೆ. ಇದನ್ನು ಬಳಸಿಕೊಂಡು ಒಳ್ಳೆಯ ಕೆಲಸ ಮಾಡಲು ನಾನು ಪ್ರಯತ್ನಿಸುತ್ತೇನೆ ಎಂದು ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ರಾಜಕಾರಣಿ, ಮಾಜಿ ಸಚಿವ, ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಈ ಕುರಿತು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹೆಗ್ಡೆ, ನಾಳೆ ನಾನು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇನೆ. ಅಲ್ಲದೇ ಕಚೇರಿಗೆ ತೆರಳಿ ಆಯೋಗದಲ್ಲಿ ನನ್ನ ಮೊದಲಿನವರು ಮಾಡಿರುವ ಕೆಲಸಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸುತ್ತೇನೆ. ಹಾಗೂ ಆಯೋಗದಲ್ಲಿ ಬಾಕಿ ಉಳಿದಿರುವ ಕೆಲಸದ ಬಗ್ಗೆಯೂ ತಿಳಿದುಕೊಳ್ಳುತ್ತೇನೆ. ಬಳಿಕವಷ್ಟೇ ನಾನು ಏನಾದರೂ ಹೇಳಲು ಸಾಧ್ಯ ಎಂದವರು ನುಡಿದರು.

ಜನರ ಮಧ್ಯೆ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದೆ. ಮುಖ್ಯಮಂತ್ರಿಗಳು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿಬಾರದಂತೆ ಪ್ರಾಮಾಣಿಕ ವಾಗಿ ಜವಾಬ್ದಾರಿ ನಿರ್ವಹಿಸುವುದಕ್ಕೆ ನನ್ನ ಮೊದಲ ಆದ್ಯತೆ. ಆಯೋಗದ ಅಧ್ಯಕ್ಷನಾಗಿ ಪರಿಣಾಮ ಕಾರಿಯಾಗಿ ಕಾರ್ಯ ನಿರ್ವಹಿಸಲು, ಅದರ ಉದ್ದೇಶವನ್ನು ತಿಳಿದುಕೊಳ್ಳಲು ಹಿಂದಿನೆಲ್ಲಾ ವರದಿಗಳ ಅಧ್ಯಯನ ನಡೆಸುತ್ತೇನೆ ಎಂದರು.

ಈ ಹಿಂದಿನ ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ವರದಿಯಿಂದ ಹಿಡಿದು ಸಿ.ಎಸ್.ದ್ವಾರಕನಾಥ್ ವರದಿಯವರೆಗೆ ಎಲ್ಲವನ್ನೂ ಅಧ್ಯಯನ ನಡೆಸುತ್ತೇನೆ. ನಂತರ ಹಿಂದುಳಿದ ವರ್ಗಗಳಿಗೆ ಮಾಡಬೇಕಾದ ಕೆಲಸದ ಬಗ್ಗೆ ನಿರ್ಧರಿಸುತ್ತೇನೆ. ನನ್ನ ಹಿತೈಷಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರು ನನಗೆ ಸಿಕ್ಕಿರುವ ಅವಕಾಶದಿಂದ ಸಂತೋಷಗೊಂಡಿದ್ದಾರೆ ಎಂದರು.

ಈಗ ಅಸ್ತಿತ್ವ ಕಳೆದುಕೊಂಡಿರುವ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಜನರಿಂದ ಆಯ್ಕೆಯಾಗಿರುವ 68 ವರ್ಷ ಪ್ರಾಯದ ಜಯಪ್ರಕಾಶ್ ಹೆಗ್ಡೆ, ಮೀನುಗಾರಿಕಾ ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಈಗಲೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.. ಅವರು ಒಮ್ಮೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಂಸದರಾಗಿಯೂ (2012-14) ಕೆಲಕಾಲ ಕಾರ್ಯನಿರ್ವಹಿಸಿದ್ದರು.

2014ರ ಲೋಕಸಭಾ ಸಭಾ ಚುನಾವಣೆಯಲ್ಲಿ ಸೋತ ಬಳಿಕ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ನೀಡಿದಿದ್ದಾಗ 2015ರಲ್ಲಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News