'ಶಾಸಕ ಲಾಲಾಜಿ ಮೆಂಡನ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ'

Update: 2020-11-23 15:05 GMT

ಉಡುಪಿ, ನ. 23: ರಾಜ್ಯ ವಿಧಾನಸಭೆಯ ಆಡಳಿತ ಪಕ್ಷದಲ್ಲಿ ಗಂಗಾಮತಸ್ಥ/ಮೊಗವೀರ ಸಮುದಾಯಕ್ಕೆ ಸೇರಿದ ಮೀನುಗಾರರ ಸಮುದಾಯದ ಏಕೈಕ ಪ್ರತಿನಿಧಿಯಾಗಿರುವ ಲಾಲಾಜಿ ಆರ್.ಮೆಂಡನ್ರಿಗೆ ರಾಜ್ಯ ಸಚಿವ ಸಂಪುಟ ದಲ್ಲಿ ಸ್ಥಾನ ನೀಡುವಂತೆ ವಿವಿಧ ಮೊಗವೀರ ಸಂಘಟನೆಗಳಿಗೆ ಸೇರಿದ ಸಮುದಾಯದ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ‌ಕುಮಾರ್ ಕಟೀಲ್ ಅವರನ್ನು ಆಗ್ರಹಿಸಿದ್ದಾರೆ.

ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪರವಾಗಿ ಮಾತನಾಡಿದ ಉಚ್ಚಿಲದ ದ.ಕ.ಮೊಗವೀರ ಹಿತಸಾಧನಾ ವೇದಿಕೆಯ ಅಧ್ಯಕ್ಷ ಪುಷ್ಪರಾಜ್ ಕೋಟ್ಯಾನ್ ಪಿತ್ರೋಡಿ,ಇದರಿಂದ ಮೀನುಗಾರಿಕಾ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಕರ್ನಾಟಕದಲ್ಲಿ 39 ವಿವಿಧ ಮೀನುಗಾರರ ಸಮುದಾಯಗಳಿದ್ದು, 80ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಕರಾವಳಿಯು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮೊಗವೀರ -ಗಂಗಾಮತಸ್ಥ ಸಮುದಾಯಕ್ಕೆ ಸೇರಿದವರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಇಂಥ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೇ, ನಿರ್ಲಕ್ಷ ಧೋರಣೆ ಅನುಸರಿಸುವ ನೋವು ನಮ್ಮನ್ನು ಕಾಡುತ್ತಿದೆ ಎಂದವರು ಹೇಳಿದರು.

ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಮ್ಮ ಸಮುದಾಯದ ಚುನಾಯಿತ ಜನ ಪ್ರತಿನಿಧಿಗಳು ಬೇರೆ ಬೇರೆ ಪಕ್ಷಗಳಿಂದ ಆಯ್ಕೆಯಾಗಿ ಆಡಳಿತ ಪಕ್ಷವಿರುವ ಕಡೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನವನ್ನು ಪಡೆದಿದ್ದಾರೆ. ಅಷ್ಟೆ ಅಲ್ಲದೆ, ಕರ್ನಾಟಕದಲ್ಲೂ ಈಹಿಂದಿನ ಎಲ್ಲಾ ಸರಕಾರಗಳು ಮೀನುಗಾರ ಸಮುದಾಯಕ್ಕೆ ಪ್ರಾತಿನಿಧಿತ್ವ ನೀಡುತ್ತಾ ಬಂದಿದ್ದರು. ಆದರೆ, ಭಾರತೀಯ ಜನತಾ ಪಕ್ಷ ಮಾತ್ರ ನಮ್ಮ ಸಮುದಾಯಕ್ಕೆ ಪ್ರಾತಿನಿ ಧಿತ್ವ ನೀಡದೆ ಮೊಗವೀರ ಸಮುದಾಯವನ್ನು ನಿರ್ಲಕ್ಷಿಸುತ್ತಿರುವುದು ಖೇಧಕರ ಎಂದು ಪುಷ್ಪರಾಜ್ ತಿಳಿಸಿದರು.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ನಮ್ಮ ಸಮುದಾಯದ ಬಹುತೇಕ ಜನರು ಭಾರತೀಯ ಜನತಾ ಪಕ್ಷದ ಮತದಾರರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಬಿಜೆಪಿ ರಾಜ್ಯದಲ್ಲಿ ನಮ್ಮ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ರೀತಿ ನಮಗೆ ಬೇಸರವನ್ನುಂಟು ಮಾಡಿದೆ. ಮೊಗವೀರ ಸಮುದಾಯಕ್ಕೆ ಸೇರಿರುವ ಕರ್ನಾಟಕದ ಏಕೈಕ ಶಾಸಕ ರಾದ ಲಾಲಾಜಿ, ಬಿಜೆಪಿಯಿಂದ 6 ಬಾರಿ ಸ್ಪರ್ಧಿಸಿ, 3 ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿಯ ಅನುಭವಿ ಕಳಂಕ ರಹಿತ ರಾಜಕಾರಿಣಿಯಾಗಿದ್ದಾರೆ ಎಂದವರು ತಿಳಿಸಿದರು.

ಹೀಗಾಗಿ ರಾಜ್ಯದ ಸಮಸ್ಥ ಗಂಗಾಮತಸ್ಥ/ ಮೊಗವೀರ ಸಮುದಾಯದ ಪರವಾಗಿ ಮುಂದಿನ ಸಚಿವ ಸಂಪುಟದ ವಿಸ್ತರಣೆ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್‌ರಿಗೆ ಸಚಿವರಾಗಿ ಸ್ಥಾನ ನೀಡುವಂತೆ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹಾಗೂ ಪಕ್ಷದ ಹೈಕಮಾಂಡನ್ನು ಆಗ್ರಹಿಸುತ್ತಿದ್ದೇವೆ ಎಂದವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮೀನುಗಾರರ ಸಂಘದ ರಾಜಾಧ್ಯಕ್ಷ ಡಾ. ದೇವಿಪ್ರಸಾದ್ ಹೆಜಮಾಡಿ, ಉಚ್ಚಿಲ ಹದಿನಾರು ಪಟ್ಣ ಮೊಗವೀರ ಸಭಾದ ಅಧ್ಯಕ್ಷ ದಾಮೋದರ ಸುವರ್ಣ, ಉಚ್ಚಿಲ ನಾಲ್ಕು ಪಟ್ಣ ಮೊಗವೀರ ಸಭಾದ ಉಪಾಧ್ಯಕ್ಷ ಮನೋಜ್ ಕಾಂಚನ್ ಹಾಗೂ ಉಚ್ಚಿಲ ದ.ಕ. ಮೊಗವೀರ ಹಿತ ಸಾಧನಾ ವೇದಿಕೆ ಕೋಶಾಧಿಕಾರಿ ಸೋಮನಾಥ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News