ನ.26ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

Update: 2020-11-23 16:06 GMT

ಉಡುಪಿ, ನ.23: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆ ಗಳ ಕರೆಯಂತೆ ನ.26ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದ್ದು, ಇದಕ್ಕಾಗಿ ರಾಷ್ಟ್ರವ್ಯಾಪಿ ಸಿದ್ಧತೆ ನಡೆಯುತ್ತಿದೆ.

ವಿವಿಧ ಕಾರಣಗಳಿಗಾಗಿ ಸಂಕಷ್ಟಕ್ಕೆ ಸಿಲುಕಿರುವ ದುಡಿಯುವ ಎಲ್ಲಾ ವಿಭಾಗ ದವರು, ವ್ಯಾಪಾರಸ್ಥರು, ಯುವಕರು, ವಿದ್ಯಾರ್ಥಿಗಳು, ರೈತರು ಮತ್ತು ಸಾರಿಗೆ ನೌಕರರು ಸಂಕಷ್ಟದ ಪರಿಹಾರಕ್ಕಾಗಿ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿ ಗೊಳಿಸಲು ಶ್ರಮಿಸಬೇಕು ಎಂದು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ಉಡುಪಿ ಇದರ ಸಂಚಾಲಕ ಕೆ.ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಡಿಕೆಗಳು:  ಕಾರ್ಮಿಕ ವಿರೋಧಿಯಾಗಿ ಕೇಂದ್ರ ಸರಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಾಗೂ ರೈತವಿರೋಧಿ ಕೃಷಿ ಸಂಬಂಧಿ ಕಾಯಿದೆಗಳನ್ನು ಹಿಂತೆಗೆದು ಕೊಳ್ಳಬೇಕು. ರಾಜ್ಯ ಸರಕಾರ ಮತ್ತೆ ಹೊರಡಿಸಿರುವ ಸುಗ್ರೀವಾಜ್ಞೆ ಹಿಂಪಡೆಯಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ ರೂ. 7,500 ನೆರವನ್ನು ಆರು ತಿಂಗಳ ಕಾಲ ನೀಡಬೇಕು. ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ನಿಲ್ಲಿಸಬೇಕು. ಎಲ್ಲಾ ಕಾರ್ಮಿಕರಿಗೆ ಪಿಂಚಣಿ ಒದಗಿಸಬೇಕು. 21,000ರೂ. ಸಮಾನ ಕನಿಷ್ಟ ವೇತನ ನಿಗದಿ ಮಾಡಬೇಕು. ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಗೆ ಶಾಸನ ರೂಪಿಸಬೇಕು.

ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯನ್ನು ನಗರ ಪ್ರದೇಶಕ್ಕೆ ವಿಸ್ತರಿಸಬೇಕು. 200 ದಿವಸಗಳ ಉದ್ಯೋಗ ನೀಡಬೇಕು. ಕೂಲಿಯನ್ನು ಕನಿಷ್ಟ 600 ರೂ.ಗೆ ಹೆಚ್ಚಿಸಬೇಕು. ಗುತ್ತಿಗೆ ಕಾರ್ಮಿಕರ ಖಾಯಂಗೆ ಅಸ್ಸಾಂ ಮತ್ತು ತಮಿಳ್ನಾಡು ಮಾದರಿಯಲ್ಲಿ ಶಾಸನ ರೂಪಿಸ ಬೇಕು ಹಾಗೂ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿಗೆ ಶಾಸನ ರೂಪಿಸಬೇಕು ಇವೇ ಮೊದಲಾದ ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ, ಉಡುಪಿ, ಕುಂದಾಪುರ, ಬ್ರಹ್ಮಾವರ ಮತ್ತು ಕಾರ್ಕಳದಲ್ಲಿ ನ.26ರಂದು ಪ್ರತಿಭಟನಾ ಸಭೆ ಮೆರವಣಿಗೆ ನಡೆಯಲಿದೆ ಎಂದವರು ಹೇಳಿದ್ದಾರೆ.

ಉಡುಪಿಯಲ್ಲಿ ಬೆಳಿಗ್ಗೆ 9:30ಕ್ಕೆ ಸರ್ವಿಸ್ ಬಸ್ ನಿಲ್ದಾಣದ ಬಳಿ ಮೆರವಣಿಗೆ ಆರಂಭವಾಗಿ ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ಸಭೆ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News