ವಿಚ್ಛೇದಿತ ಪತ್ನಿಯ ಮಾನಹಾನಿ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ

Update: 2020-11-23 16:14 GMT

ಮಂಗಳೂರು, ನ.23: ವಿಚ್ಛೇದಿತ ಪತ್ನಿಯ ಮಾನಹಾನಿ ಮಾಡಿರುವ ಕುರಿತಾದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಪಿಟಿಸಿಎಲ್ ನಿವೃತ್ತ ಇಂಜಿನಿಯರ್ ಕೋಚು ಶೆಟ್ಟಿಯನ್ನು ದೋಷಿ ಎಂದು ತೀರ್ಮಾನಿಸಿರುವ ಹೈಕೋರ್ಟ್ ಆತನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಂಗಳೂರು ಎಲಿಂಜೆ ನಿವಾಸಿ ಕೋಚು ಶೆಟ್ಟಿ ಕೆಪಿಟಿಸಿಎಲ್‌ನಲ್ಲಿ ಮಂಗಳೂರು ಮತ್ತು ಪುತ್ತೂರಿನಲ್ಲಿ ಕರ್ತವ್ಯದಲ್ಲಿದ್ದರೆ, ವಿಚ್ಛೇದಿತ ಪತ್ನಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದರು. ಕೋಚು ಶೆಟ್ಟಿ ವಿಚ್ಛೇದನದ ಬಳಿಕವೂ ಆಕೆಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದ. ಬೇರೆಯವರ ಹೆಸರಿನಲ್ಲಿ ಪತ್ರಗಳನ್ನು ಬರೆದು ಸುಳ್ಳು ಕತೆಕಟ್ಟಿ ಚಾರಿತ್ರಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದ. ಅಶ್ಲೀಲ ಕತೆ ಚಾರಿತ್ರದ ಕುರಿತು ಸಿಬ್ಬಂದಿಯವರೂ ಓದಬೇಕು ಎನ್ನುವ ಉದ್ದೇಶದಿಂದ ಬ್ಯಾಂಕ್ ವಿಳಾಸಕ್ಕೂ ತೆರೆದ ಅಂಚೆಯ ಮೂಲಕ ಪತ್ರ ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ.

ಪತ್ರದಲ್ಲಿರುವುದು ವಿಚ್ಛೇದಿತ ಪತಿಯ ಕೈಬರಹ ಎಂದು ತಿಳಿದು ನ್ಯಾಯವಾದಿ ಮೂಲಕ ಎಚ್ಚರಿಕೆ ನೋಟಿಸ್ ನೀಡಿದರೂ, ಪತ್ರ ಕಳುಹಿಸುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಮನನೊಂದು ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನಹಾನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಅಲ್ಲಿಯೂ ಆತ ಕೈಬರಹ ತನ್ನದಲ್ಲ ಎನ್ನುವ ಸುಳ್ಳುವಾದ ಮುಂದುವರಿಸಿದ್ದ. ಆತನ ಕೈಬರಹದ ಪತ್ರಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದನ್ನು ಪರಿಶೀಲಿಸಿದ ತಜ್ಞರು, ಕೈಬರಹವು ಕೋಚು ಶೆಟ್ಟಿಯದ್ದೇ ಎಂದು ವರದಿ ನೀಡಿದ್ದರು. ಎಲ್ಲ ಸಾಕ್ಷಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಕೇವಲ ಬೆರಳಚ್ಚು ತಜ್ಞರ ವರದಿ ಆಧಾರದಲ್ಲಿ ಶಿಕ್ಷೆ ನೀಡಿರುವುದು ತಪ್ಪು ಹಾಗೂ ಪತ್ರಗಳ ಮೂಲಕ ಮಾನಹಾನಿಯಾಗಿದೆ ಎನ್ನುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಆರೋಪಿ ವಾದಿಸಿದ್ದ. ಈ ವಾದ ತಳ್ಳಿಹಾಕಿರುವ ಉಚ್ಚ ನ್ಯಾಯಾಲಯ, ಸಂವಿಧಾನವು ದೇಶದ ಪ್ರತಿ ಪ್ರಜೆಗೆ ಆತನ ಹೆಸರು ಮತ್ತು ಗೌರವ ಅತ್ಯಮೂಲ್ಯ ಆಸ್ತಿಯಾಗಿದ್ದು ಅದು ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಮಹತ್ತರ ತೀರ್ಪು ನೀಡಿದೆ.

ನಮ್ಮ ದೇಶದಲ್ಲಿ ಜೀವಕ್ಕಿಂತಲೂ ಮಾನಕ್ಕೆ ಅಧಿಕವಾದ ಮೌಲ್ಯವಿದೆ, ಮಾನಕ್ಕಾಗಿ ಜೀವವನ್ನೇ ಪಣಕ್ಕಿಟ್ಟ ಸಾವಿರಾರು ಉದಾಹರಣೆಗಳು ಈ ದೇಶದ ಸಂಸ್ಕೃತಿ ದೇಶದ ಚರಿತ್ರೆಯಲ್ಲಿದೆ. ಮಹಿಳೆಯ ಮಾನವನ್ನು ಅನಾಮಧೇಯ ಪತ್ರಗಳ ಮೂಲಕ ಹಾನಿಗೊಳಿಸುವುದು ಗಂಭೀರವಾದ ಶಿಕ್ಷಾರ್ಹ ಅಪರಾಧವೆಂದು ಘೋಷಿಸಿ, ಆರೋಪಿ ಯಾವುದೇ ರೀತಿಯ ಕನಿಕರಕ್ಕೆ ಅರ್ಹನಲ್ಲ ಎಂದು ತೀರ್ಮಾನಿಸಿ ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿರುವ ತೀರ್ಪನ್ನು ಎತ್ತಿ ಹಿಡಿದಿದೆ. ಆತನ್ನು ತಕ್ಷಣವೇ ಬಂಧಿಸಿ ಜೈಲು ಶಿಕ್ಷೆಗೆ ಗುರಿ ಪಡಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆದೇಶ ನೀಡಿದೆ.

ಪಿರ್ಯಾದುದಾರರ ಪರವಾಗಿ ಪಿ.ಪಿ.ಹೆಗ್ಡೆ ಅಸೋಸಿಯೇಟ್ಸ್ ವಕೀಲರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News